27 C
Karnataka
Tuesday, May 14, 2024

    ದೀಪಾವಳಿ ಬಂದಾಯಿತು ..

    Must read

    ಏನೇ ಬಂದರೂ, ಏನೇ ಆದರೂ ಏನೇ ನಿಂತರೂ ದೀಪಾವಳಿ ಎಂದಿನಂತೆ ಬಂದು ನಿಂತಿದೆ.. ಮನದ ಮೂಲೆಯಲ್ಲಿ ಹಣತೆ ಹಚ್ಚಿದಂತೆ ಒಂಚೂರು ಹೊಸತನ, ಒಂದಿಷ್ಟು ಹರ್ಷ .. ಬೇಸರದ ನಡುವೆ, ಏಕತಾನತೆಯ ನಡುವೆ ಬೆಳಕಿನ ಕಿಡಿಗಳು , ಕುಡಿಗಳ ನೆಪದಲ್ಲಿ ಸಣ್ಣ ಕಿರುನಗೆ .

    ದೀಪಾವಳಿ ಬರುವುದೇನೋ ಹೊಸತಲ್ಲ . ಬುದ್ಧಿ ತಿಳಿಯುವ ಮುನ್ನಿನಿಂದಲೂ ಬರುತ್ತಲೇ ಇದೆ.ತೀರಾ ಚಿಕ್ಕವಳಿದ್ದಾಗ ಅಮ್ಮನ ಸೆರಗ ಮರೆಯಲ್ಲಿ ನಿಂತು ಹೊರಗಿನ ಪಟಾಕಿಗಳ ಸದ್ದಿಗೆ ಬೆದರಿ ಕಿವಿಮುಚ್ಚಿ, ಸುರುಸುರುಕಡ್ಡಿಯ ಬೆಡಗಿಗೆ ಕಣ್ಣರಳಿಸಿ ದೂರದಿಂದಲೇ ಕಣ್ತುಂಬಿಸಿಕೊಂಡು ಅಮ್ಮನೋ ಅಣ್ಣನೋ ಒತ್ತಾಯದಿಂದ ಒಂದು ಮತಾಪು ಹಚ್ಚಿಸಿದರೆ ಹೆದರುತ್ತಲೇ ಹಚ್ಚುವ ದಿನಗಳಿಂದ ಮುಂದಿನ ದೀಪಾವಳಿಯ ಹೊತ್ತಿಗೆ ಗನ್ ಹಿಡಿದು ಕೇಪ್ ಪಟಾಕಿ ಹೊಡೆಯುವಲ್ಲಿಗೆ ಬಡ್ತಿ . ಢಮ್ ಎನ್ನಿಸುವಲ್ಲಿ ಖುಷಿ . ಭಯಂಕರ ಹೊಗೆ ಬರುವ ಹಾವಿನ ಪಟಾಕಿ ಹಚ್ಚಿದ ಕೂಡಲೇ ಕಪ್ಪು ಹಾವಿನಂತೆ ಹೊಗೆಕಾರುತ್ತಾ ಸುರುಳಿಸುರುಳಿ ಸುತ್ತುತ್ತಿದ್ದರೆ ಬಿಟ್ಟಕಣ್ಣು ಬಿಟ್ಟುಕೊಂಡು ನೋಡುವ ಹೊತ್ತಿಗೆ ಅಲ್ಯಾರೋ ದೊಡ್ಡ ಲಕ್ಷ್ಮಿ ಪಟಾಕಿ ಆಟಂ ಬಾಂಬ್ ಹಚ್ಚಿದ ಸದ್ದಿಗೆ ಕುಮುಟಿ ಬಿದ್ದು ಸಂಜೆಯ ಹೊತ್ತಿಗೆ ಮನೆಮನೆಯ ಮುಂದೆ ನಕ್ಷತ್ರ ಕಡ್ಡಿಯ ಬೆಡಗಿಗೆ ಮನಸೋತು.. ಮತ್ಯಾರೋ ಟ್ವೈನ್ ದಾರ ಕಟ್ಟುತ್ತಿದ್ದಾರೆ ಅಂದರೆ ರೈಲು ಪಟಾಕಿಯೇ ಅದು ಎಂದು ಎಲ್ಲ ಮಕ್ಕಳೂ ಓಡಿಹೋಗಿ ಆ ಮನೆಯ ಮುಂದೆ ನಿಂತು ಎಲ್ಲ ಸಂಭ್ರಮ ಮುಗಿದ ಮೇಲೆ ಕನಸಲ್ಲೂ ಪಟಾಕಿ ಹಚ್ಚಿ ಮುಂದಿನ ವರ್ಷಕ್ಕದೋ ಮತ್ತೊಂದು ಬಡ್ತಿ .

    ದೀಪಾವಳಿ ಎಂದರೆ ಬರೀ ಪಟಾಕಿಯಲ್ಲ .. ಅಭ್ಯಂಜನವೆಂಬ ಪರಮ ಹಿಂಸೆಯ ಶಿಕ್ಷೆ ಅನುಭವಿಸಿ ಸೆಗಣಿಯಿಂದ ಪುಟ್ಟ ಪುಟ್ಟ ಬೆನಕನನ್ನು ಮಾಡಿ ಅವುಗಳ ತಲೆಗೊಂದೊಂದು ಚೆಂಡು ಹೂವಿಟ್ಟು ಬಾಗಿಲಿನ ಎರಡೂ ಬದಿ ಸ್ಥಾಪಿಸಿ ನರಕಾಸುರನ ಕಥೆ ಕೇಳಿ ವರ್ಷಕ್ಕೊಮ್ಮೆ ಬರುವ ಬಲೀಂದ್ರನಿಗೆ ಶ್ರದ್ಧಾಭಕ್ತಿಯಿಂದ ಕೈ ಮುಗಿದು ಪಟಾಕಿ ಹೊಡೆದು ಹೋಳಿಗೆಯೂಟ ಉಂಡರೆ ಹಬ್ಬ ಮುಗಿಯಿತು.

    ಹದಿಹರೆಯ ಮೈತುಂಬಿದ ಹೊತ್ತಿನ ದೀಪಾವಳಿಯ ಸಡಗರವೇ ಬೇರೆ .. ಈಗ ಅಭ್ಯಂಜನಕ್ಕೆ ತಕರಾರಿಲ್ಲ. ಎದ್ದೊಡನೆ ಅಂಗಳದಲ್ಲಿ ಚೆಂದದ ರಂಗವಲ್ಲಿ ಅರಳಿಸಿ ಅದನ್ನೊಂದಿಷ್ಟು ಹೂ , ಬಣ್ಣಗಳಿಂದ ಸಿಂಗರಿಸಿ , ನೆತ್ತಿಗೆ ಮೆತ್ತಿದ ಎಣ್ಣೆಯನ್ನು ಪಸೆಯೂ ಉಳಿಯದಂತೆ ತಿಕ್ಕಿ ತೊಳೆದು ಹೊಸ ಬಟ್ಟೆಯುಟ್ಟು ಚಳಿಚಳಿಯ ಹದಾ ಬಿಸಿಲಲ್ಲಿ ಕೂದಲೊಣಗಿಸಿ ಸಡಿಲವಾಗಿ ನೀರುಜಡೆ ಹೆಣೆದು ಉದ್ದಜಡೆಗೆ ಹೂ ಮುಡಿದು ಲಂಗದ ನೆರಿಗೆ ಚಿಮ್ಮಿಸಿ ಗೆಜ್ಜೆಕಾಲಲ್ಲಿ ಅತ್ತಿತ್ತ ಓಡಾಡಿ ಕೈಬಳೆಗಳ ಸದ್ದಿಗೆ ತಂತಾನೇ ಮರುಳಾಗಿ ಕನ್ನಡಿಯ ಮುಂದೆ ಅರ್ಧ ಗಂಟೆ ತಿದ್ದಿದ ಕಾಡಿಗೆಯನ್ನೇ ತಿದ್ದುತ್ತಾ ಝುಮುಕಿ ತುಸು ಅಲುಗುವಂತೆ ಬೇಕೆಂದೇ ಕತ್ತು ಕೊಂಕಿಸುತ್ತಾ ಹಣತೆ ಹಚ್ಚುವಾಗ ಬೆಳಗುವುದು ಹಣತೆಯಷ್ಟೇ ಎಂದುಕೊಂಡರೆ ಆ ವಯಸ್ಸಿಗೇ ಮೋಸ.. ಮುಖ ಬೆಳಗಿ , ಹಚ್ಚಿದ ಹಣತೆಯ ಬೆಳಕು ಕಣ್ಣಲ್ಲೂ ಮಿನುಗಿದವಳ ನೋಡುವುದೇ ಸೊಗಸು.. ಬಿಂಕದಿಂದ ಹೊರಗಡೆ ಅಂಗಳದಲ್ಲಿ ನಿಂತು ಕೈಯ್ಯಲ್ಲಿ ನಾಜೂಕಾಗಿ ನಕ್ಷತ್ರ ಕಡ್ಡಿ ಹಿಡಿದು ಬೆಳಕು ಸುರಿಸುತ್ತಿದ್ದರೆ ಜಗತ್ತೇ ಜಗಮಗ .

    ಮತ್ತೆ ಮದುವೆಯ ನಂತರದ ಹೊಸ ದೀಪಾವಳಿ . ಮನದನ್ನ ಪಕ್ಕದಲ್ಲೇ ನಿಂತ ಸಂಭ್ರಮ ಇವಳು ನೋಡಲೆಂದು ಭಾರೀ ಸದ್ದಿನ ಆಟಂಬಾಂಬ್ ಸಿಡಿಸಿ ಬೀಗುವ ಅವನು , ಹೆದರಿದ್ದಕ್ಕಿಂತ ಹೆಚ್ಚಿನ ಹೆದರಿಕೆ ನಟಿಸಿ ಆತುಕೊಳ್ಳುವ ಇವಳು .ಕೈಲಿ ಹಿಡಿದ ನಕ್ಷತ್ರ ಕಡ್ಡಿಯನ್ನು ಮೀರಿಸುವ ಇವಳ ಮೊಗದ ಹೊಳಪನ್ನು ಕಣ್ತುಂಬಿಕೊಳ್ಳುವ ಅವನು .. ಅವನು ನೋಡುತ್ತಿರುವನೆಂದು ಗೊತ್ತಿದ್ದೇ ಬಿಂಕದಿಂದ ಹಣತೆ ಹಿಡಿದ ಇವಳು .. ಹಬ್ಬ ಬದುಕಿಗೇಕೆ ಬೇಕು ಎನ್ನುವವರು ಒಮ್ಮೆಯಾದರೂ ಅನುಭವಿಸಬೇಕಿದ್ದನ್ನು ..

    ಬದುಕು ಇಷ್ಟೇ ಅಲ್ಲವಲ್ಲ .. ಮುಂದಿನ ಬಡ್ತಿ ಮಡಿಲಲ್ಲಿ ಮಲಗಿದೆ .. ಪಟಾಕಿ ಸಿಡಿದರೆ ಕೂಸಿನ ಕಿವಿ ಮುಚ್ಚಿ ಬೆದರುತ್ತಾಳೆ ಇವಳು.. ಬಾಗಿಲು, ಕಿಟಕಿ ಭದ್ರ ಪಡಿಸಿ ಆತಂಕದಿಂದ ಕೂಸು, ಬಾಣಂತಿಯ ಪಕ್ಕ ಕೂರುತ್ತಾನೆ ಅವನು.

    ಮರುವರ್ಷಕ್ಕಾಗಲೇ ಕೂಸಿನ ಮುಂದೆ ನಕ್ಷತ್ರ ಕಡ್ಡಿ ಹಿಡಿದ ಅವನು .. ದೂರದಿಂದಲೇ ಕೂಸಿಗೆ ಅದನ್ನು ತೋರಿಸಿ ನಗುವ ಇವಳ ಕಣ್ಣಲ್ಲಿ ನಕ್ಷತ್ರಕಡ್ಡಿ .ಮುಂಬಡ್ತಿ ಬಾರದಿದ್ದೀತೇ.. ಮಕ್ಕಳ ಪಟಾಕಿ ಸಡಗರ .ಅಭ್ಯಂಜನಕ್ಕೆ ಎಳೆದೊಯ್ಯುವ ಇವಳು .. ಅಂಗಡಿಗೆ ಕರೆದೊಯ್ದು ಪಟಾಕಿ ಕೊಡಿಸುವ ಇವನು ….. ಇಷ್ಟು ದೀಪಾವಳಿಗಳ ಸಡಗರಗಳಲ್ಲಿ ಬದುಕಿನ ಚಕ್ರ ಒಂದು ಸುತ್ತು ತಿರುಗಿದ್ದು ಯಾವಾಗ .. ಯಾರಿಗೆ ಗೊತ್ತು ಯಾರಿಗೆ ಬೇಕು.

    ದೀಪಾವಳಿ ಮತ್ತೆ ಬಂದಿದೆ. ಬಡ್ತಿಯ ಸಡಗರ ಅನುಭವಿಸದೇ ಇರಬೇಡಿ . ಜವಾಬ್ದಾರಿ ಮರೆಯಬೇಡಿ. ನರಕಾಸುರ , ಬಲೀಂದ್ರ ಕಥೆಗಳೆಲ್ಲವನ್ನೂ ಕೇಳೋಣ. ನೆನೆಯೋಣ . ಮನೆಯೊಳಗೆ ಮನದೊಳಗೆ ಚೆಂದದ ಒಂದು ಪುಟ್ಟ ಹಣತೆಯನ್ನು ಹಚ್ಚೋಣ . ಬದುಕಲ್ಲಿ ಬೆಳಕು ತುಂಬಿಕೊಳ್ಳೋಣ.

    ಎಲ್ಲರಿಗೂ ದೀಪಾವಳಿಯ ಶುಭಾಶಯ.

    Photo by Sonika Agarwal on Unsplash

    ಮಾಲಿನಿ ಗುರುಪ್ರಸನ್ನ
    ಮಾಲಿನಿ ಗುರುಪ್ರಸನ್ನ
    ಪಂಪನಿಂದ ಇತ್ತೀಚಿನವರೆಗೂ ಇರುವ ಕಾವ್ಯಗಳನ್ನು ಸಾಹಿತ್ಯ ಪ್ರಕಾರಗಳನ್ನೂ ಓದುವ ಹುಚ್ಚಿರುವ, ಬೇಂದ್ರೆಯವರ ನಾದವೈಭವಕ್ಕೆ ಮನಸೋಲುವ , ಅಡಿಗರೆಂಬ ಕೈದೀಪದ ಬೆಳಕಲ್ಲಿ ಹಾದಿ ಸವೆಸುತ್ತಿರುವ, ನರಸಿಂಹಸ್ವಾಮಿಯವರನ್ನು ಮನೆದೇವರನ್ನಾಗಿಸಿಕೊಂಡ ಕುಮಾರವ್ಯಾಸನ ಮಗಳು ಎಂದು ತಮ್ಮನ್ನು ಕರೆದುಕೊಳ್ಳುವ ಮಾಲಿನಿ ಗುರುಪ್ರಸನ್ನ ಕನ್ನಡದ ಸಾಹಿತ್ಯದ ವಸ್ತು ನಿಷ್ಠ ವಿಮರ್ಶಕಿ.
    spot_img

    More articles

    3 COMMENTS

    1. ಚಂದ ಬರೆದಿರುವೆ . ಲೇಖನ ಓದಿದಾಗ ಮಲ್ಲಾಡಿಹಳ್ಳಿ ಯಲ್ಲಿ ನಾವೆಲ್ಲಾ ಕಾಂಪಿಟೇಷನ್ ಮೇಲೆ ಅಂಗಳಕೆ ಸಗಣಿ ನೀರು ಹಾಕಿ ಚಂದ ರಂಗೋಲಿ ಹಾಕುತ್ತಿದ್ದೆವು.ಅದ ನೆನಪಾಯಿತು. ಹಾಗೇಯೇ ಕಳೆದ ವರ್ಷ ಪಕ್ಕದ ಮನೆಯವರು ಹೊಡೆದ ಪಟಾಕಿ ಸದ್ದಿಗೆ ಮೊಮ್ಮಗನ ಎರಡು ಕಿವಿ ಬಿಗಿಯಾಗಿ ಮುಚ್ಚಿದ್ದು ಎಲ್ಲಾ ನೆನಪಾಯಿತು.

    LEAVE A REPLY

    Please enter your comment!
    Please enter your name here

    Latest article

    error: Content is protected !!