28.1 C
Karnataka
Friday, May 10, 2024

    ಕೋವಿಡ್ ನೆನಪಿಟ್ಟುಕೊಳ್ಳಲೇಬೇಕಾದ 20 ಅಂಶಗಳು

    Must read

    ಕೋವಿಡ್ ಪ್ಯಾಂಡಮಿಕ್ ಎನ್ನುವ ಅಭ್ಯಾಗತ ನಮ್ಮ ಬದುಕಿನ ಒಳಹೊಕ್ಕು ಅದರ ಜೊತೆಗೆ ನಮ್ಮ ಬದುಕನ್ನು ಹೊಂದಾಣಿಕೆ ಮಾಡಿಕೊಳ್ಳುವಂತೆ ಮನುಕುಲವನ್ನು ಬೆದರಿಸಿದ್ದು, ನೋಯಿಸಿದ್ದು, ಸಾಯಿಸಿದ್ದು, ಮಣಿಸಿದ್ದು ಈಗಾಗಲೇ ಬಹುಕಾಲ ನಡೆದುಹೋಗಿದೆ.

    ಇಂತಹ ಅಪರೂಪದ ಅವಘಡವೊಂದರ ಅಧ್ಬುತ ಅನುಭೂತಿಯಲ್ಲಿ ಮೊದಲಿಗೆ ಬೆಕ್ಕಸ ಬೆರಗಾಗಿ ನಂತರ ಹೈರಾಣಾದ ಮನುಷ್ಯ ಕೋವಿಡ್ ವೈರಾಣುವಿನ ಪಾಷಾಣ ಹೃದಯಕ್ಕೆ ಹೆದರಿ ಹಿಮ್ಮೆಟ್ಟಲೇಬೇಕಾಯಿತು. ಅದರ ಹೊಡೆತಕ್ಕೆ ನಲುಗಿರುವ ಈ ಪ್ರಪಂಚಕ್ಕೆ ಚೇತರಿಕೊಳ್ಳಲು ಹಲವು ವರ್ಷಗಳೇ ಬೇಕಾದೀತು. ಈ ಪ್ಯಾಂಡೆಮಿಕ್ ಸೃಷ್ಟಿಸಿರುವ ಆರ್ಥಿಕ ಸಂಕಷ್ಟಗಳ ಕೋಟಲೆಗಳು ದಶಕಗಳ ಕಾಲ ನಮ್ಮೊಡನೆ ಉಳಿದಾವು. ಅಕಸ್ಮಿಕವಾಗಿ ಪ್ರಾಣ ಕಳೆದುಕೊಂಡ ಅಸಂಖ್ಯಾತ ಜೀವಗಳನ್ನು ನೆನೆವ ಸಂಸಾರಗಳು ಬದುಕಿನುದ್ದಕ್ಕೂ ಕೊರೋನಾ ಹೆಮ್ಮಾರಿಯನ್ನು ಶಪಿಸಿಯಾರು. ಆದರೆ ಎಷ್ಟು ಕಾಲ ಎಂದು ಜನರು ಹಪಹಪಿಸಲು ಸಾಧ್ಯ?

    ಬಹಳ ಕಾಲ ಅವಘಡವೊಂದು ನಮ್ಮ ಬದುಕುಗಳ ಜೊತೆ ಚೆಲ್ಲಾಟವಾಡುವಾಗ ಆ ಸುಸ್ತಿನಲ್ಲಿ ಸೋಲುವ ಸಂವೇದನೆಗಳು (fatigue  de-sensitivity) ಮನುಷ್ಯನನ್ನು ಈಗ ಕಾಡುತ್ತಿವೆ. ಬದುಕುಳಿಯಲು ಅವಘಡದ ಉಪಸ್ಥಿತಿಯನ್ನು ನಿರ್ಲ್ಯಕ್ಷಿಸಿ ಮುಂದುವರಿಯಲೇಬೇಕಾದ ಅನಿವಾರ್ಯತೆಯನ್ನು ಆತ ಈಗ ಎದುರಿಸುತ್ತಿದ್ದಾನೆ.ಹಾಗಾಗಿ ಹೊಟ್ಟೆಯ ಪಾಡಿಗಾಗಿ ಕೋವಿಡ್ ನ್ನು ಎದುರಿಸಿಕೊಂಡೇ ದುಡಿಯಲು ಅವನು ಮುಂದಾಗಿದ್ದಾನೆ. ಆರ್ಥಿಕ ಹೊಡೆತದ ಝಳವನ್ನು ಕಡಿಮೆಮಾಡಲು ಸರಕಾರಗಳು ನಾಗರಿಕರ ದುಡಿತವನ್ನು ನಾನಾರೀತಿ ಪೋಷಿಸುತ್ತಿವೆಯಾದರು ಆ ಆರ್ಥಿಕ ಹೊರೆಯನ್ನು ಬಹುಕಾಲ ಹೊರಲಾರವು.

    ಅದರ ಜೊತೆಗೆ ಜನರ ಉತ್ಪಾದಕ ದುಡಿಮೆಯನ್ನು ಕೂಡ ಪ್ರೋತ್ಸಾಹಿಸಲೇಬೇಕಾಗುತ್ತದೆ. ಕೋವಿಡ್ ನ ಜೊತೆ ಬದುಕುವ ಆಯ್ಕೆ ಮಾತ್ರವೇ ಈಗ ಅವನ ಮುಂದಿರುವುದು.ಅದೇ ಈಗ ಬದುಕಿನ ಸಹಜತೆಯ ಹೊಸ ಅವತಾರವಾಗಿದೆ.

    ವ್ಯಾಕ್ಸಿನ್ ಅಥವಾ ಲಸಿಕೆ ಮುಂದಿನ ವರ್ಷ ದೊರೆಯುವ ಭರವಸೆಯಿದೆ.ಆದರೆ ಇನ್ನೂ ಒಂದು ವರ್ಷವಾದರೂ ನಾವು ಕೋವಿಡ್ ನೊಡನೆ ಜಾಣತನದ ಹೊಂದಾಣಿಕೆ ಮಾಡಿಕೊಂಡೇ ಬದುಕಬೇಕಾಗಿದೆ. ಇದು ಅನಿವಾರ್ಯವೂ ಹೌದು. ಆ ನಂತರವೂ ಪ್ರತಿ ವರ್ಷ ಕೋವಿಡ್ ಲಸಿಕೆ ನೀಡುವ ಕೆಲಸ ನಡೆಯಬೇಕಾಗುತ್ತದೆ. ಪಾಶ್ಚಾತ್ಯ ಚಳಿ- ದೇಶಗಳಲ್ಲಿ ಪ್ರತಿವರ್ಷ ಚಳಿಗಾಲ ಶುರುವಾದ ಕೂಡಲೇ ’ ಫ್ಲೂ ಲಸಿಕೆ ’ ಕೊಡುವುದು ಸರ್ವೇ ಸಾಮಾನ್ಯವಾದ ವಿಚಾರ. ದಶಕಗಳಿಂದಲು ನಡೆದುಬಂದಿರುವ ಮುಂಜಾಗ್ರತೆಯ ಕ್ರಮ.ಹಾಗೆಯೇ ಕೋವಿಡ್ ಲಸಿಕೆಯನ್ನೂ ಪ್ರತಿವರ್ಷ ಪ್ರಪಂಚದ ಎಲ್ಲರಿಗೂ ನೀಡುವ ಕಾರ್ಯ ಶುರುವಾಗಬಹುದು.ಇದೊಂದು ಅಭೂತಪೂರ್ವ ಅಗಾಧತೆಯನ್ನು ಬೇಡುವ ಅಗತ್ಯ. ಈ ಬಗ್ಗೆ ಪ್ರಪಂಚದಲ್ಲಿ ಸ್ಪರ್ಧೆ ಅನೇಕ ವರ್ಷಗಳ ಕಾಲ ಮುಂದುವರೆಯುವುದರಲ್ಲಿ ಅನುಮಾನವಿಲ್ಲ. ವೈರಾಣುವನ್ನು ಸ್ಥಗಿತಗೊಳಿಸಬಲ್ಲ/ಕೊಲ್ಲಬಲ್ಲ  ವ್ಯಾಕ್ಸಿನ್ ಒಂದು ತನ್ನ ಪ್ರಾಯೋಗಿಕ ಹಂತಗಳನ್ನೆಲ್ಲ ಮುಗಿಸಿ, ಅವುಗಳಿಂದ ಅಪಾಯ ಇಲ್ಲವೆಂದಾಗಿ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಗೀಕೃತವಾದರೆ ಮನುಕುಲಕ್ಕೆ ಆಗ ಥಟ್ಟನೆ ಹೊಸದೊಂದು ಭರವಸೆ ಸಿಗುತ್ತದೆ.ಆ ಹಂತದಿಂದ ಮುಂದಿನ ವರ್ಷಗಳನ್ನು ಮತ್ತು ಮುಂದಿನ ಭವಿಷ್ಯವನ್ನು ಕಟ್ಟಲು ನಾವು ಮತ್ತೆ ಶಕ್ತರಾಗುತ್ತೇವೆ.

    ಸಧ್ಯಕ್ಕೆ ಲಾಕ್ ಡೌನ್ ನ ಪರಿಣಾಮಗಳು ತನ್ನ ಗರಿಷ್ಠ ಮಟ್ಟ ಮುಟ್ಟಿದ ನಂತರವೂ ನಿರ್ಬಂಧಗಳನ್ನು ಮುಂದುವರೆಸಲು ಪ್ರಯತ್ನಿಸಿದರೆ ಮನುಷ್ಯನ ಸಹನೆ ಮಿತಿ ಮೀರುವುದನ್ನು ಕಾಣುವುದು ಅನಿವಾರ್ಯವಾಗುತ್ತದೆ. ಆತ ನಿರ್ಬಂಧಗಳನ್ನು ಲಕ್ಷಿಸದೆ ಬದುಕುಳಿಯಲು ಅಪಾಯಕ್ಕೆ ತನ್ನನ್ನು ತಾನು ದೂಡಿಕೊಳ್ಳುತ್ತಾನೆ.ಅದಕ್ಕಾಗಿ ನಾನಾ ರೀತಿ ಪ್ರಯತ್ನಿಸುತ್ತಾನೆ.ಹಾಗೆ ಮಾಡದೆ ಮಾನವನಿಗೆ ಬೇರೆ ದಾರಿಯೂ ಇಲ್ಲವಾಗಿದೆ.

    ಮೊದಲ ಅಲೆ ಕಳೆದನಂತರ ಮತ್ತೆ ಬಲಿಷ್ಠವಾಗುತ್ತಿರುವ ಕೋವಿಡ್ ನ್ನು ಹತ್ತಿಕ್ಕಲು ಹಲವು ದೇಶಗಳು ನಾನಾ ಬಗೆಯ ಸಣ್ಣ ಪುಟ್ಟ ನಿರ್ಬಂಧಗಳನ್ನು ಹೇರಲು ಪ್ರಯತ್ನಿಸಿ ಸೋಲುತ್ತಿವೆ.ಇದೀಗ ವಿಧಿಯಿಲ್ಲದೆ, ತಮ್ಮ ಆರೋಗ್ಯ ವ್ಯವಸ್ಥೆ ಮತ್ತು ಜನರ ನೈತಿಕ  ಸ್ಥೈರ್ಯವನ್ನು ಕಾಪಾಡಲು ಜರ್ಮನಿ,ಬೆಲ್ಜಿಯಮ್, ಫ್ರಾನ್ಸ್, ವೇಲ್ಸ್ ಮತ್ತು ಇಂಗ್ಲೆಂಡ್ ದೇಶಗಳು ಎರಡನೇ ರಾಷ್ಟ್ರ ಮಟ್ಟದ ಲಾಕ್ ಡೌನ್ ನ್ನು ಜಾರಿಗೆ ತಂದಿವೆ.

    ಸ್ಪೇನ್, ಇಟಲಿ, ರಶಿಯಾ, ಪೋಲಂಡ್ ಮತ್ತಿತರ ಹಲವು ದೇಶಗಳು ಅದೇ ದಿಕ್ಕಿನತ್ತ ನೋಡುತ್ತಿವೆ. ಯುದ್ಧ, ಆಂತರಿಕ ಯುದ್ಧಗಳು ಮತ್ತು ಪ್ರಕೃತಿ ವಿಕೋಪಗಳಲ್ಲಿ ಸಿಲುಕಿರುವ ಆರ್ಮೇನಿಯ, ಅಜರ್ಬಜಾನ್, ಸಿರಿಯಾ, ಟರ್ಕಿ, ಥೈಲ್ಯಾಂಡ್,ಲೆಬನಾನ್ ನಂತಹ ದೇಶಗಳು ಕೋವಿಡ್ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುವ ಸ್ಥಿತಿಯಲ್ಲಿಲ್ಲ.

    ಅಮೇರಿಕಾ ಎನ್ನುವ ಮತ್ತೊಂದು ಪ್ರಪಂಚ ತನ್ನದೇ ರಾಜಕೀಯ ಹುನ್ನಾರಗಳಲ್ಲಿ ಇಡೀ ದೇಶವನ್ನು ಕೊರೋನ ಅಲೆಯಡಿ ತಳ್ಳಿದ್ದು ವಿಷಾದನೀಯ.ಟ್ರಂಪ್ ಪಕ್ಷದ ಚುನಾವಣ ಸಭೆಗಳಿಂದಲೇ 30,000 ಹೊಸ ಪ್ರಕರಣಗಳು ಮತ್ತು 700 ಕೋವಿಡ್ ಸಾವುಗಳು ಸಂಭವಿಸಿವೆಯೆಂದು ಸಮೀಕ್ಷೆಯೊಂದು ವರದಿ ಮಾಡಿತ್ತು.

    ಇದೀಗ ಕೋವಿಡ್ ಪ್ಯಾಂಡೆಮಿಕ್ ನ ಸುತ್ತಲೇ ನಡೆದ ನವೆಂಬರ್ 3 ರ ಅಮೆರಿಕಾದ  ಚುನಾವಣೆಯಲ್ಲಿ ಟ್ರಂಪ್ ಸೋತಲ್ಲಿ ಪ್ರತಿಸ್ಪರ್ಧಿ ಜೋ ಬೈಡನ್ ಗಿಂತಲೂ ಹೆಚ್ಚಾಗಿ ವೈರಾಣುವೊಂದು ಆಳುವ ಪಕ್ಷವನ್ನು ಸೋಲಿಸಿತೆಂದೇ ಇತಿಹಾಸದಲ್ಲಿ ದಾಖಲಾಗುವುದರಲ್ಲಿ ಸಂಶಯವಿಲ್ಲ. ಟ್ರಂಪ್ ನ ರಿಪಬ್ಲಿಕನ್ ಪಕ್ಷವೇ ಗೆದ್ದರೂ ಕಾಲು ಕೋಟಿ ಅಮೆರಿಕನ್ನರನ್ನು ಸಾಯಿಸಿದ ,ಸ್ವಂತ ಟ್ರಂಪ್ ಮತ್ತು ಮೈಕ್ ಪೆನ್ಸ್ ರನ್ನು ಕಾಡಿಸಿದ ಕೋವಿಡ್ ತನ್ನ ಅಟ್ಟಹಾಸವನ್ನು ಮುಂದುವರೆಸುವುದರಲ್ಲಿ ಸಂಶಯವಿಲ್ಲ.

    ಮೆಕ್ಸಿಕೋ,ಬ್ರೆಜಿಲ್ ಮತ್ತು ಭಾರತದಂತಹ  ದೇಶಗಳ ಆರ್ಥಿಕತೆಗೆ ಮತ್ತೊಂದು ಲಾಕ್ ಡೌನ್ ಮರಳಿ ಏಳಲಾಗದ ಅಥವಾ ಬಹುಕಾಲ ಬೇಡುವ ಮಾರಣಾಂತಿಕ ಹೊಡೆತವಾಗಬಹುದು. ವಿಶ್ವದ 175 ದಶ ಲಕ್ಷ ಜನರನ್ನು ಕೋವಿಡ್ ಈಗಾಗಲೇ ತೀವ್ರ ಬಡತನಕ್ಕೆ  ತಳ್ಳಿರುವುದನ್ನು ವಿಶ್ವ ಸಂಸ್ಥೆ ಧೃಡಪಡಿಸಿರುವ ಈ ಸಂದರ್ಭದಲ್ಲಿ ನಮ್ಮ ಬದುಕು ಮೊದಲಿನಂತಾಗಲು ಬಹುಕಾಲ ಬೇಕಾದೀತು.

    ಇವೇ ಕಾರಣಗಳಿಗೆ ಭಾರತವಾಗಲೀ ಅಥವಾ ಬೇರೆ ದೇಶಗಳಾಗಲೀ ಕೈ ಕಟ್ಟಿಕುಳಿತು, ಕೋವಿಡ್ ನಿಯಮಗಳನ್ನು ಸಡಿಸಲಾಗುವುದಿಲ್ಲ. ಸೋಂಕು ನಿಯಂತ್ರಣ ಕ್ರಮವನ್ನು ಮತ್ತಷ್ಟು ಕಟ್ಟು ನಿಟ್ಟಾಗಿ ಮುಂದುವರೆಸಲೇಬೇಕಾಗುತ್ತದೆ. ಆ ನಿಯಮಗಳಡಿಯೇ ಕೆಲಸ ಮಾಡುತ್ತ ಕೋವಿಡ್ ದುರಂತಗಳು ನಿಯಂತ್ರಣ ತಪ್ಪಿ ಹರಡದಂತೆ ಇನ್ನಷ್ಟು ಉಗ್ರವಾಗಿ ತಡೆಯಬೇಕಾಗಿದೆ.

    ಅಲ್ಲಿಯವರೆಗೆ ನಾವು ಮರೆಯದೆ ನೆನಪಿಟ್ಟುಕೊಳ್ಳಬೇಕಾದ ಅಂಶಗಳು ಮತ್ತು ಪಾಲಿಸಬೇಕಾದ ನಿಯಮಗಳು ಎಂದಿನಂತೆ ಉಳಿಯುತ್ತವೆ.

    ನೆನಪಿಟ್ಟುಕೊಳ್ಳಬೇಕಾದ ಅಂಶಗಳು

    1) ಕೊರೋನಾ ವೈರಸ್ಸುಗಳು ಹಲವು ಬಗೆಯವು. ಇತ್ತೀಚೆಗೆ ಕಂಡುಬಂದು ಈ ಹೊಸ ವ್ಯಾಧಿಯನ್ನು ಹರಡುತ್ತಿರುವ ವೈರಸ್ಸನ್ನು ಕೋವಿಡ್ -19 ಎಂದು ಗುರುತಿಸಿದ್ದೇವೆ

    ಇವು ಸಣ್ಣ ನೆಗಡಿ ಜ್ವರದಿಂದ ಹಿಡಿದು ಅತ್ಯಂತ ಉಲ್ಬಣ ಲಕ್ಷಣಗಳನ್ನು Middle east respiratory syndrome (MERS) ಅಥವಾ Severe Acute Respiratory Syndrome (SARS) ನ್ನು ಇದು ನಮ್ಮಲ್ಲಿ ಉಂಟುಮಾಡಬಲ್ಲವು.

    2) ಮುಖ್ಯ ಲಕ್ಷಣಗಳೆಂದರೆ ಜ್ವರ, ಒಣ ಕೆಮ್ಮು ಮತ್ತು ಸುಸ್ತು. ಇವುಗಳ ಜೊತೆ ಮೈ ಕೈ ನೋವು, ಮೂಗು ಕಟ್ಟುವುದು, ತಲೆನೋವು, ಕಣ್ಣಿನ ಸೋಂಕು, ಗಂಟಲು ಕೆರೆತ, ವಾಸನೆ ಮತ್ತು ರುಚಿ ಕಳೆದುಕೊಳ್ಳುವುದು, ಉಸಿರಾಡಲು ತೊಂದರೆ ಇತ್ಯಾದಿ ಲಕ್ಷಣಗಳು ಕಂಡುಬಂದಿವೆ.

    3) ಕೊರೋನಾ ಬಂದ ಶೇಕಡ 80ಜನ ಆಸ್ಪತ್ರೆಯ ನೆರವಿಲ್ಲದೆ ಶೀಘ್ರವಾಗಿ ಗುಣಮುಖರಾಗುತ್ತಾರೆ. ಪ್ರತಿ ಐವರಲ್ಲಿ ಒಬ್ಬರಿಗೆ ಉಸಿರಾಟದ ತೊಂದರೆ ಕಾಣಬಲ್ಲದು. ಕೊರೋನಾ ಯಾರಿಗೆ ಬೇಕಾದರೂ ಬರುತ್ತದೆ. ಆದರೆ ವೃದ್ಧರಿಗೆ ಮತ್ತು ಬೇರೆ ಖಾಯಿಲೆಯಿರುವವರು ಇದರಿಂದ ಹೆಚ್ಚು ನಲುಗುತ್ತಾರೆ. ಇಂಥವರಲ್ಲೇ ಸಾವು ಕೂಡ ಅಧಿಕ.

    4) ನಿಮ್ಮಲ್ಲಿ ಕೋವಿಡ್ ಸೋಂಕು ಕಾಣಿಸಿದ ಕೂಡಲೇ ಅಥವಾ ಪರೀಕ್ಷೆ ಪಾಸಿಟಿವ್ ಎಂದು ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಿಲ್ಲ.  ಮನೇಯಲ್ಲೇ ಉಳಿದು, ಮನೆಯ ಇತರರಿಂದ ದೂರವಿದ್ದು, ಜ್ವರ ಇತ್ಯಾದಿಗಳಿಗೆ ಸರಳ ಚಿಕಿತ್ಸೆ ಮಾಡಿಕೊಂಡರೆ ಸಾಕು. ಸೋಂಕಿದ್ದಾಗ ಎಲ್ಲ ಕಡೆ ಮುಟ್ಟುವುದನ್ನು ನಿಲ್ಲಿಸಬೇಕು. ಕೈಗಳನ್ನು ಅರ್ಧ ನಿಮಿಷದ ಕಾಲ ಪದೇ ಪದೇ ಸ್ವಚ್ಚಗೊಳಿಸಿಕೊಳ್ಳುತ್ತಿರಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.ಎದೆಯಲ್ಲಿ ಒತ್ತಡ, ಉಸಿರಾಟದ ತೊಂದರೆ ಇತ್ಯಾದಿ ಕಾಣಿಸಿಕೊಂಡರೆ ಆ ಕೂಡಲೇ ವೈದ್ಯರ ಸಹಾಯವನ್ನು ಕೋರುವುದು ಉತ್ತಮ.

    5) ಕೋವಿಡ್ ಹರಡುವುದು ಮನುಷ್ಯರಿಂದ ಮನುಷ್ಯರಿಗೆ. ಅವರು ಮಾತನಾಡುವಾಗ, ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್ಸುಗಳು ಇತರರಿಗೆ ಹರಡುತ್ತದೆ. ಅಥವಾ ಸೋಂಕಿತರು ಮುಟ್ಟಿದ ಜಾಗಗಳನ್ನು ಮುಟ್ಟಿ ನಮ್ಮ ಬಾಯಿ, ಮೂಗು ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದಲೂ ಬರುತ್ತದೆ. ಆದ್ದರಿಂದ ಮೇಲೆ ಹೇಳಿದ ಕ್ರಮಗಳನ್ನು ಎಲ್ಲರೂ ಪಾಲಿಸಿದರೆ ಕೋವಿಡ್ ಹರಡುವ ಸಾಧ್ಯತೆಗಳನ್ನು ಸಾಧ್ಯವಾದಷ್ಟೂ ತಡೆಯಬಹುದು.

    6) ಸೋಂಕಿನ ಲಕ್ಷಣಗಳಿಲ್ಲದೆಯೂ ಜನರಲ್ಲಿ ಕೋವಿಡ್ ಇರಬಹುದು. ಆದ್ದರಿಂದ ಅಂಥವರಿಂದಲೂ ಸೋಂಕು ಹರಡಬಲ್ಲದು. ಆದ್ದರಿಂದ ಮನೆಯ ಹೊರಗೆ ಮತ್ತು ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮತ್ತು ನಿಯತ್ತಿನಿಂದ ಮುಖ ಗವಸನ್ನು ಧರಿಸಬೇಕು. ದಂಡಕ್ಕೆ ಹೆದರಿ ಆಥವಾ ಪೊಲೀಸರಿಗಾಗಿ ಮಾಸ್ಕ್ ಧರಿಸಿದರೆ ನಿಮಗೆ ಮತ್ತು ಇತರರಿಗೆ ಪ್ರಯೋಜನವಾಗಲಾರದು.

    7) ನೀವು ಅಕಸ್ಮಾತ್ ಸೋಂಕಿತರ ಸಂಪರ್ಕಕ್ಕೆ ಬಂದರೆ ಅಥವಾ ನೀವು ಒಡನಾಡಿದ ವ್ಯಕ್ತಿಗೆ ಸೋಂಕು ಬಂದಿದೆ ಎಂದು ತಿಳಿದರೆ ನಿಮಗೂ ಸೋಂಕು ತಗುಲಿರುವ ಸಾಧ್ಯತೆ ಅತ್ಯಧಿಕ. ನೀವು ಅಗತ್ಯವಾಗಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ಮನೆಯಲ್ಲಿರುವ ವ್ಯಕ್ತಿಯಿಂದಲೇ ಕೋವಿಡ್ ಬಂದಿದ್ದಲ್ಲಿ ಅವರ ಜೊತೆಗೆ ನೀವೂ ಮನೆಯಲ್ಲೇ ಕ್ವಾರಂಟೈನ್ ನಿಯಮಗಳನ್ನು ಪಾಲಿಸಬಹುದು. ಆದರೆ ಮಲೇರಿಯ ಅಥವಾ ಡೆಂಗ್ಯೂ ಜ್ವರ ಇರುವ ಪ್ರದೇಶದಲ್ಲಿದ್ದರೆ ಸೋಂಕಿನ ಲಕ್ಷಣಗಳು ಕಾಣಿಸಿದ ಕೂಡಲೇ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

    8) ಮಕ್ಕಳಿಗೆ ಸೋಂಕು ಬಂದಲ್ಲಿ ಅವರ ವಯಸ್ಸಿನ ಆಧಾರದ ಮೇಲೆ ಅವರಿಗೆ ನಿಯಮಗಳನ್ನು ಪಾಲಿಸಲು ಕಲಿಸಬೇಕಾಗುತ್ತದೆ.

    9) ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳುವುದು (Self-Isolation) ಅಂದರೆ ಅದು ಸೋಂಕಿತ ವ್ಯಕ್ತಿಗೆ ಅನ್ವಯವಾಗುವ ಮಾತು- ಹೊರಗೆ ತೆರಳದೆ, ಕೆಲಸಕ್ಕೆ ಹೋಗದೆ ಮನೆಯಲ್ಲಿರುವುದು. ಮನೆಯಲ್ಲಿ ಕುಟುಂಬದ ಸದಸ್ಯರಿಂದ ಅಂತರ ಕಾಪಾಡಿಕೊಂಡು ಪ್ರತ್ಯೇಕ ಕೋಣೆಯಲ್ಲಿರುವುದು.ಆ ಕೋಣೆಯ ಕಿಟಕಿಗಳನ್ನು ಸಾಧ್ಯವಾದಷ್ಟು ತೆರೆದಿಡುವುದು.ಕೈಗಳನ್ನು ನಿಯಮಿತವಾಗಿ ಸ್ಯಾನಿಟೈಸ್ ಮಾಡಿಕೊಳ್ಳುವುದು. ಸೌಲಭ್ಯವಿದ್ದಲ್ಲಿ ಪ್ರತ್ಯೇಕ ಶೌಚ ಬಳಸುವುದು ಇತ್ಯಾದಿ.

    ಇದು ಸಾಧ್ಯವಾಗದಿದ್ದಲ್ಲಿ  1 ಮೀಟರ್ ಅಥವಾ ನಿಮ್ಮ ಎರಡೂ ಕೈಯಳತೆಯ ದೂರವನ್ನು ಸೋಂಕಿತ ವ್ಯಕ್ತಿಯ ಜೊತೆ ಕಾಯ್ದುಕೊಳ್ಳಿ.ಮಲಗುವಾಗ ಕೂಡ ಈ ನಿಯಮವನ್ನು ಪಾಲಿಸಬೇಕು.

    9) ಕ್ವಾರಂಟೈನ್ (Quarantine) ಎಂದರೆ ನಿಮಗೆ ಲಕ್ಷಣ ಇರಲಿ ಬಿಡಲಿ, ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಲ್ಲಿ ಅಥವಾ ಸೋಂಕಿತ ಪ್ರದೇಶಗಳಿಗೆ ಹೋಗಿ ಬಂದಿದ್ದಲ್ಲಿ ನಿಮ್ಮ ಚಟುವಟಿಕೆಗಳನ್ನು ಕಡಿಮೆಮಾಡಿಕೊಂಡು ಪ್ರತ್ಯೇಕವಾಗಿರುವುದು. ನಿಮಗೂ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯೇ ಎಂಬುದನ್ನು ಈ ಸಮಯದಲ್ಲಿ ಗಮನಿಸುತ್ತಿರಬೇಕು.  ಇವೆರಡರ ಉದ್ದೇಶವೂ ಸೋಂಕು ಹರಡುವುದನ್ನು ತಡೆಯುವುದೇ ಆಗಿದೆ. ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳುವುದಕ್ಕೂ ಮತ್ತು ಕ್ವಾರಂಟೈನಿಗೂ ಇದೇ ವ್ಯತ್ಯಾಸ.

    10) ಕೋವಿಡ್ ನಿಂದ ರಕ್ಷಿಸಿಕೊಳ್ಳುವುದು ಎಂದರೆ ಅದು ಬರದಂತೆ ಎಚ್ಚರಿಕೆ ತೆಗೆದುಕೊಳ್ಳುವುದೇ ಆಗಿದೆ. ಹೆಚ್ಚು ಜನರಿರುವ ಕಡೆ ಹೋಗಬಾರದು. ಸದಾ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ನಿತ್ಯ ವ್ಯಾಯಾಮ ಮಾಡಬೇಕು.ಉತ್ತಮ ಆಹಾರ ಮತ್ತು ಬೇಕಾದಷ್ಟು ನೀರು ಕುಡಿಯಬೇಕು. ಮಿಕ್ಕಂತೆ ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು.

    11) ಅಕಸ್ಮಾತ್ ಕೋವಿಡ್ ಬಂದರೆ ಅದರ ಲಕ್ಷಣಗಳು ಕಾಣಿಸಿಕೊಳ್ಳಲು 5-6 ದಿನಗಳು ಬೇಕು.ಆದರೆ ಕೆಲವರು 1-14 ದಿನಗಳನ್ನು ತೆಗೆದುಕೊಂಡಿದ್ದೂ ಇದೆ.ಕೋವಿಡ್ ಎಲ್ಲ ವಯಸ್ಸಿನವರಿಗೆ ಬರಬಲ್ಲದು.ಆದರೆ ಹಿರಿಯರಲ್ಲಿ ಕೋವಿಡ್ ಮಾರಣಾಂತಿಕವಾಗುವ ಸಾಧ್ಯತೆ ಹೆಚ್ಚು.

    12) ಕೋವಿಡ್ ವೈರಸ್ಸು ಪ್ಲಾಸ್ಟಿಕ್ ಮತ್ತು ಸ್ಟೀಲ್ ಮೇಲೆ ಮೇಲೆ 72ಗಂಟೆ, ಹಿತ್ತಾಳೆಯ ಮೇಲೆ 4 ಗಂಟೆ ಮತ್ತು ರಟ್ಟಿನ ಮೇಲೆ 24 ಗಂಟೆ ಬದುಕುಳಿಯಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಆದರೆ ಯಾವುದೇ ಸಾಮಾನ್ಯ ಸೋಂಕು ನಾಶಕಗಳನ್ನು ಬಳಸಿ ತೊಳೆದರೆ ಅವು ನಾಶವಾಗಿಬಿಡಬಲ್ಲವು. ಹೀಗಾಗಿ ವಸ್ತು ಮತ್ತು ಜಾಗಗಳನ್ನು ಸ್ವಚ್ಛಗೊಳಿಸಿಕೊಂಡನಂತರ ನಮ್ಮ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.

    13) ಮಲದಲ್ಲಿ ಕೊರೋನಾ ವೈರಸ್ಸು ಕಂಡುಬಂದಿದೆಯಾದರೂ ಅದರಿಂದ ಇನ್ನೊಬ್ಬರಿಗೆ ಹರಡಿದ ಉದಾಹರಣೆಗಳಿಲ್ಲ.ನೀರಲ್ಲಿ ಅಥವಾ ಚರಂಡಿಯ ನೀರಿನಲ್ಲಿ ವೈರಸ್ಸು ಬದುಕುಳಿದಿರುವುದು ಇದುವರೆಗೆ ವರದಿಯಾಗಿಲ್ಲ.

    14) ಈ ಕೊರೋನಾ ಕಾಲದಲ್ಲಿ ಯಾರಿಗೆ ಸಾಧಾರಣ ನೆಗಡಿ -ಕೆಮ್ಮಾಗಿದೆ, ಯಾರಿಗೆ ನಿಜಕ್ಕೂ ಕೋವಿಡ್ ಆಗಿದೆ ಎಂಬ ಬಗ್ಗೆ ಹೇಳಲು ಸಾಧ್ಯವಿಲ್ಲವಾಗಿದೆ. ಈ ಬಗ್ಗೆ ಜನರಲ್ಲಿ ಸಹಜವಾಗಿಯೇ ಗೊಂದಲವಿರಬಹುದು.

    ಮೈ ಕೈ ನೋವು, ಕೆಮ್ಮು, ಗಂಟಲು ಕೆರೆತ, ಸೀನು, ಜ್ವರ  ಬಂದಂತಾಗುವುದು ಇತ್ಯಾದಿ ಲಕ್ಷಣಗಳು ಬಂದ ಎಲ್ಲರೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬೇಕಾದಲ್ಲಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಂಡು ಕನಿಷ್ಠ ಎರಡು ವಾರಗಳ ಕಾಲ ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳಬೇಕು.

    15) ಮೆಡಿಕಲ್ ಮಾಸ್ಕ್ ಗಳನ್ನು ಸರಿಯಾಗಿ ಉಪಯೋಗಿಸಬೇಕು. ಅವುಗಳನ್ನು ಬಳಸುವ ಮೊದಲು ಕೈಯನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ ಸ್ವಚ್ಛಗೊಳಿಸಿಕೊಳ್ಳಿ. ಬಣ್ಣದ ಭಾಗ ಹೊರಕ್ಕೆ ಬರುವಂತೆ ಧರಿಸಿ.ಸರ್ಜಿಕಲ್ ಮಾಸ್ಕ್ ಗಳ ಮೇಲ್ತುದಿ ಗಟ್ಟಿಯಾಗಿರುತ್ತದೆ. ಇದನ್ನು ನಿಮ್ಮ ಮೂಗಿನ ಆಕಾರಕ್ಕೆ ಜಾಗ ಬಿಡದಂತೆ ಅದುಮಿ ಅಳವಡಿಸಿಕೊಳ್ಳಿ.ಕೆಳಭಾಗವನ್ನು ಎಳೆದು ನಿಮ್ಮ ಗಲ್ಲವನ್ನು ಮುಚ್ಚುವಂತೆ ಧರಿಸಿ.ಒಂದೇ ಬಳಕೆಗೆ ಮೀಸಲಾದ ಮಾಸ್ಕ್ ಗಳನ್ನು ಒಮ್ಮೆ ಬಳಸಿದ ನಂತರ ಕಸದ ತೊಟ್ಟಿಯಲ್ಲಿ ಬಿಸಾಡಿ. ಕೈಗಳನ್ನು ಶುಚಿಗೊಳಿಸಿಕೊಳ್ಳಿ. ಒಗೆದು ಬಳಸುವಂತಹ ಮಾಸ್ಕ್ ಆದಲ್ಲಿ ಅವುಗಳನ್ನು ಮತ್ತೆ ಮತ್ತೆ ಬಳಸಬಹುದು.

    16) ಸೋಂಕಿನ ನಂತರ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದರೂ ತತ್ ಕ್ಷಣ ಎಲ್ಲರೂ ಏಕ ಪ್ರಕಾರದಲ್ಲಿ ಗುಣಮುಖರಾಗದಿರಬಹುದು. ಕೆಲವರಲ್ಲಿ ಹೆಚ್ಚು ಕಾಲ ರೋಗದ ನಾನಾ ಪ್ರಕಾರದ ಲಕ್ಷಣಗಳು, ಸೋಲು ಸುಸ್ತು ಉಳಿಯಬಹುದು. ಅಂಥವರ ಬಗ್ಗೆ ಸಹಾನುಭೂತಿಯಿರಲಿ. ಲಾಂಗ್ ಕೋವಿಡ್ ಎನ್ನುವ ಈ ಪ್ರಕಾರದ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ.

    17) ಕೋವಿಡ್ ಹೊಸ ವ್ಯಾಧಿಯಾದರೂ ಇದರಿಂದಾಗಿ ಮರಣ ಹೊಂದುವವರ ಸಂಖ್ಯೆ ಅತಿ ಕಡಿಮೆ. ಆದ್ದರಿಂದ ವಿಪರೀತವಾಗಿ ಹೆದರಬೇಡಿ. ಆದರೆ ಎಚ್ಚರಿಕೆಗಳನ್ನು ಮಾತ್ರ ಅಚ್ಚುಕಟ್ಟಾಗಿ ಮತ್ತು ನಿಯತ್ತಿನಿಂದ ಪಾಲಿಸಿ.

    18) ಈ ಮಹಾಮಾರಿಯನ್ನು ಎದುರಿಸಲು ನಾವು ಪಾಲಿಸಬೇಕಿರುವುದು ಸರಳ ಉಪಾಯಗಳೇ ಹೊರತು ಹೆಚ್ಚಿನವೇನಿಲ್ಲ. ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಮತ್ತು ಸಾಮಾಜಿಕ ಅಂತವನ್ನು ಕಾಪಾಡಿಕೊಳ್ಳಲು ಸಾಧ್ಯವಿರುವ ಜಾಗಕ್ಕೆ ಮಾತ್ರ ಹೋಗುವುದು ಇತ್ಯಾದಿ ಅಷ್ಟೇ. ಸಾಕ್ಷಿ ಆಧಾರಗಳಿಲ್ಲದ ಯಾವುದೇ ಔಷದ, ಆರೈಕೆ, ಸಾಮಗ್ರಿಗಳ ಮೇಲೆ ಅನಗತ್ಯವಾಗಿ ಹಣವನ್ನು ಖರ್ಚುಮಾಡಿ ಶ್ರಮ ಪಡುವ ಅಗತ್ಯವಿಲ್ಲ.

    19)  ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ನಾವೆಲ್ಲ ಒಂದಿಷ್ಟು ಅಥವಾ ಬಹಳಷ್ಟು ನೊಂದಿದ್ದೇವೆ. ಈ ಬಗ್ಗೆ ಜನರೊಡನೆ ದೂರವಾಣಿಯಲ್ಲಿ ಅಥವಾ ದೂರನಿಂತು ಮಾತಾಡಿ ಮನಸ್ಸನ್ನು ಹಗುರಮಾಡಿಕೊಳ್ಳಿ. ದೈಹಿಕ ವ್ಯಾಯಾಮಗಳ ಜೊತೆಗೆ ಸುತ್ತಮುತ್ತಲಿನ ಜನರ ಮಾನಸಿಕ ಆರೋಗ್ಯದ ಮೇಲೂ ಕಣ್ಣಿಡಿ.

    20) ಈ ಹಿಂದೆಯೂ ಮನುಕುಲ ಇಂತಹ ಹೊಸವ್ಯಾಧಿಗಳನ್ನು ಎದುರಿಸಿದೆ. ಎದುರಿಸಿ ಗೆದ್ದಿದೆ. ಅದಕ್ಕೆಲ್ಲ ಸಮಯ ಹಿಡಿಯುತ್ತದಾದರೂ ಇದರಿಂದಲೂ ನಾವು ಹೊರಬಂದೇ ಬರುತ್ತೇವೆ.  ಈ ಬಗ್ಗೆ ಭರವಸೆಯಿರಲಿ. ಮುಂದೆ ಈ ಮಟ್ಟದ ಮಹಾನ್ ಅವಘಡ ನಡೆಯದಂತೆ ಕಾಪಾಡಬೇಕಾದಲ್ಲಿ ಪರಿಸರದೊಡನಿನ ನಮ್ಮ ಲಕ್ಷ್ಮಣರೇಖೆಯನ್ನು ದಾಟದಿರೋಣ. ಪ್ರಕೃತಿಯ ಸಮತೋಲನ ಹಾಳಾಗದಂತಿರಲು ಎಲ್ಲರೂ ಕೂಡಿ ಪ್ರಯತ್ನ ಪಡೋಣ

    ಮುಂದಿನ ವರ್ಷದ ಶುರುವಾತಿಗೆ ಲಸಿಕೆಗಳು ಲಭ್ಯವಾದಲ್ಲಿ ಎರಡನೆಯ ಅಲೆಯ ತೀವ್ರತೆಯನ್ನು ಭಾರತ ಸ್ವಲ್ಪ ಸುಲಭವಾಗಿ ಹತ್ತಿಕ್ಕಲು ಸಾಧ್ಯವಾಗುತ್ತದೆ ಎನ್ನುವ ಆಶಾದಾಯಕ ಯೋಚನೆಗಳಿವೆ. ಇದನ್ನು ಸಾಧಿಸಲು ಲಸಿಕೆ ಬಡವರಿಗೂ ಶ್ರೀಮಂತರಿಗೂ ಏಕಪ್ರಕಾರ ಲಭ್ಯವಾಗಬೇಕು ಎನ್ನುವುದನ್ನು ಮರೆಯದಿರೋಣ.

    ಕೋವಿಡ್ ನಿಂದ ಕಲಿಯಬಹುದಾದ ವಿಚಾರಗಳು

    ಕೋವಿಡ್ ಎನ್ನುವುದು ಮನುಕುಲಕ್ಕೆ ಸಿಕ್ಕ ಮಹಾನ್ ಎಚ್ಚರಿಕೆ.

    ಪ್ರಕೃತಿ ಮುನಿದರೆ ಬಡವ ಬಲ್ಲಿದನೆನ್ನದೆ ಮನುಕುಲವನ್ನು ಬಗ್ಗುಬಡಿಯಬಲ್ಲದು ಎಂಬುದನ್ನು ಈ ಪ್ಯಾಂಡೆಮಿಕ್ ಇನ್ನಿಲ್ಲದಂತೆ ತೋರಿಸಿದೆ. ಅದಕ್ಕೆ ಪ್ರಳಯವೇ ಆಗಬೇಕೆಂದೇನಿಲ್ಲ.ಕಣ್ಣಿಗೆ ಕಾಣದ ಅತಿಚಿಕ್ಕ ವೈರಾಣು ಕೂಡ ಸಾಕೇ ಸಾಕು ಎಂದು ಮನುಷ್ಯನನ್ನು ಬಡಿದು ತಿಳಿಸಿದ ಸಂದೇಶವಿದು.

    ನಮ್ಮ ಆರೋಗ್ಯ ವ್ಯವಸ್ಥೆಗಳು, ಸಾಮಾಜಿಕ ರೀತಿಗಳು, ಪ್ರಜಾ ಪ್ರಭುತ್ವದ ಆಡಳಿತ ನೀತಿಗಳು ಎಲ್ಲವೂ ಇದರಿಂದ ಸತ್ಯಶೋಧನೆಗೆ ಒಳಪಟ್ಟಿವೆ. ಈ ಸಂಧರ್ಭದಲ್ಲಿ ಮನುಷ್ಯರ ನಡುವಿನ ಸಂಬಂಧಗಳು, ಒಡೆಯ-ನೌಕರರ ನಡುವಿನ ನಂಬಿಕೆಗಳು, ಮನುಷ್ಯನ ಮಾನಸಿಕ ಸಮತೋಲನಗಳು ಇತ್ಯಾದಿ ವಿಚಾರಗಳೆಲ್ಲ ಬೇಗುದಿಗೆ ತಳ್ಳಲ್ಪಟ್ಟಿದ್ದು ಸುಳ್ಳಲ್ಲ. ಸ್ವಾರ್ಥ ಮತ್ತು ಸಾಮಾಜಿಕ ಒಳಿತುಗಳು, ಸರ್ಕಾರಗಳು ಮತ್ತು ಜನ ನಂಬಿಕೆಗಳು ಎಲ್ಲರ ಕಣ್ಣೆದುರು ಪೊರೆ ಕಳಚಿದ್ದು ಕೂಡ ಸುಳ್ಳಲ್ಲ.

    ಒಂದರ ಜೊತೆ ಮತ್ತೊಂದು ಅತ್ಯಂತ ಸಂಕೀರ್ಣವಾಗಿ ಹೊಸೆದುಕೊಂಡಿರುವ ನಮ್ಮ ಸಾಮಾಜಿಕ ವ್ಯವಸ್ಥೆಗಳು ಕೋವಿಡ್ ನ ಜಗ್ಗಾಟದಲ್ಲಿ ಒತ್ತಟ್ಟಿಗೆ ಮುಗ್ಗರಿಸಿದವು. ಝರ್ಜರಿತವಾದವು. ಕುಸಿದುಬಿದ್ದವು, ಹೊಸ ದಾರಿಗಳನ್ನು ಅನ್ವೇಷಿಸಿದವು. ಮತ್ತೆ ಮತ್ತೆ  ಸುಧಾರಿಸಿ ಚೇತರಿಸಿಕೊಂಡು ಸೇವೆಗೆ ಸಿದ್ಧವಾದವು. ಮನುಷ್ಯನ ಅತಿಕ್ರಮಣ ಆಪತ್ತನ್ನು ತಂದಂತೆ ಆತನ ಹಲವು ಆವಿಷ್ಕಾರಗಳು ಅವನ ಕೈ ಹಿಡಿದು ನಡೆಸಿದವು. ಆದರೆ ಎಷ್ಟೇ ಪ್ರಗತಿ ಸಾಧಿಸಿದರೂ ಪ್ರಕೃತಿ ವಿಕೋಪಗಳನ್ನು ತಡೆದುಕೊಳ್ಳುವಲ್ಲಿ ಹುಲು ಮಾನವನ ಪ್ರಗತಿ ಧಾರುಣವಾಗಿ ಸೋಲು ಕಾಣುತ್ತವೆಂಬ ನಿತ್ಯ ಸತ್ಯವನ್ನು ಕೋವಿಡ್ ಪ್ಯಾಂಡೆಮಿಕ್ ನಿಚ್ಚಳವಾಗಿ ತೋರಿಸಿದೆ.

    ಆದ್ದರಿಂದ ಪ್ರಕೃತಿ ವಿಕೋಪಗಳನ್ನು ತಡೆಗಟ್ಟುವುದರಲ್ಲೇ ವಿಶ್ವದ ಒಳಿತಿದೆ. ಅಂತೆಯೇ ಕೋವಿಡ್ ವೈರಸ್ಸನ್ನು ನಮ್ಮ ಉದಾಸೀನತೆಯ ಮೈಮರೆವಿನಿಂದ ಆಹ್ವಾನಿಸಿಕೊಳ್ಳುವುದಕ್ಕಿಂತ ಎಚ್ಚರಿಕೆ ವಹಿಸಿ ದೂರವಿಡುವುದರಲ್ಲೇ ನಮ್ಮ ಜಾಣತನವಿದೆ. ಅಕಸ್ಮಾತ್  ನಮಗೆ ಕೋವಿಡ್ ಬಂದಲ್ಲಿ ಅದನ್ನು ಇತರರಿಗೆ ನೀಡದಂತೆ ಕಾಳಜಿವಹಿಸುವುದರಲ್ಲಿ ಮಾನವೀಯ ಔದರ್ಯವೂ ಅಡಗಿದೆ.ಇದನ್ನು ಮುಂಬರುವ ವರ್ಷಗಳಲ್ಲೂ ನಾವು ನೆನಪಿಟ್ಟುಕೊಂಡು ನಡೆಯಬೇಕಿದೆ.

    ಅಂತರ ರಾಷ್ಟ್ರೀಯ  ಮಟ್ಟದ ಸೌಹಾರ್ದತೆಗಳೂ ಸೇರಿದಂತೆ ನಾವೆಲ್ಲರೂ ಒಟ್ಟಾಗಿ ಕೋವಿಡ್ ಹಿಂದೆ ಬಿಟ್ಟುಹೋಗುವ ಎಲ್ಲ ನಷ್ಟಗಳನ್ನು ಸರಿಪಡಿಸಲು ಒಂದುಗೂಡಬೇಕಿದೆ. ಇಂಥದ್ದೇ  ಅವಘಡಗಳು ಮತ್ತೆ ನಡೆಯದಿರುವಂತೆ ನೋಡಿಕೊಳ್ಳಲು ಜಾತಿ, ಮತ, ಧರ್ಮ ಲಿಂಗ ಮತ್ತು ದ್ವೇಷ ಇಂಥವೆಲ್ಲ ಸಣ್ಣ ವಿಚಾರಗಳನ್ನು ಹಿಂದೆ ಬಿಟ್ಟು ಬದುಕಿನ ಬಟ್ಟೆಯ ಧೂಳನ್ನು ಜಾಡಿಸಿ ಕೊಡವಿ ಹೊಸ ಹುರುಪನ್ನು, ವೈಚಾರಿಕತೆಯನ್ನು, ಪ್ರಕೃತಿಯನ್ನು ಅತಿಕ್ರಮಿಸದಎಚ್ಚರಿಕೆಗಳನ್ನು ಮೈಗೂಡಿಸಿಕೊಂಡು ಮತ್ತೆ ಬದುಕನ್ನು ಕಟ್ಟಲು ತಯಾರಾಗಬೇಕಿದೆ. ಕಣ್ಣಿಗೆ ಕಾಣದಷ್ಟು ಸೂಕ್ಷ್ಮ ಜೀವಿ ವೈರಸ್ಸೊಂದು ಮನುಕುಲವನ್ನು ನಾಶಮಾಡಬಲ್ಲದು ಎಂಬ ಈ ಕಾಣ್ಕೆಯಲ್ಲಿ ನಾವೇ ಶ್ರೇಷ್ಠರೆಂಬ ನಮ್ಮ ಅಹಂಕಾರವನ್ನು ತ್ಯಜಿಸೋಣ.ಕೋವಿಡ್ ನಂತರದ ಬದುಕು ತರಲಿರುವ ಬದಲಾವಣೆಯ ಗಾಳಿಗೆ ಹುಲುಕಡ್ಡಿಯಂತೆ ಬಾಗಿ ಶರಣಾಗಿ ಬದುಕುಳಿಯೋಣ. ಕೋವಿಡ್ ಅವಘಡದಿಂದಲೂ ಕಲಿತು ಬಾಳೋಣ.

    ಈ ಅಂಕಣದೊಂದಿಗೆ ಪ್ರಕಟವಾದ ಚಿತ್ರ ಬರೆದವರು ಸಂತೋಷ ಸಸಿಹಿತ್ಲು.ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಸಾಕಷ್ಟು ಚಿತ್ರಗಳು ಪ್ರಕಟವಾಗಿವೆ. ಕಾರ್ಟೂನ್, ಇಲಸ್ಟ್ರೇಷನ್, ಭಾವಚಿತ್ರಗಳನ್ನು ರಚಿಸುವಲ್ಲಿ ಅವರು ಸಿದ್ಧ ಹಸ್ತರು. ಅವರ ಸಂಪರ್ಕ ಸಂಖ್ಯೆ 9986688101

    ಲೇಖಕಿಯ ಟಿಪ್ಪಣಿ

    ಕೋವಿಡ್ ಡೈರಿ ಅಂಕಣವನ್ನು ಪ್ರತಿವಾರ 6 ತಿಂಗಳಿಂದ ಸತತವಾಗಿ ಓದುತ್ತ, ಆಗಾಗ ಆದರೆ ನಿಯಮಿತವಾಗಿ ಪ್ರತಿಕ್ರಿಯಿಸುತ್ತ ನನ್ನನ್ನು ಉತ್ತೇಜಿಸಿದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು. ಒಂದು ಪ್ಯಾಂಡೆಮಿಕ್ ನ ಬಿರುಗಾಳಿಯ ಹೊಡೆತದ ಕೇಂದ್ರ ಸಮಯದಲ್ಲಿ (Eye of the Storm) ವೈಯಕ್ತಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕೋನಗಳಿಂದ ಅದು ನನಗೆ ಕಂಡಂತೆ ದಾಖಲಿಸುತ್ತ ನಿಮ್ಮೊಂದಿಗೆ  ಸಹ ಪ್ರಯಾಣ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಆ ಅವಕಾಶವನ್ನು ಕಲ್ಪಿಸಿದ ಕನ್ನಡಪ್ರೆಸ್ ನ ಪ್ರಧಾನ ಸಂಪಾದಕರಾದ ಶ್ರೀವತ್ಸ ನಾಡಿಗರಿಗೆ ನನ್ನ ವಂದನೆಗಳು.

    ಡಾ. ಪ್ರೇಮಲತ ಬಿ, ಲಂಡನ್

    ಸಂಪಾದಕರ ಟಿಪ್ಪಣಿ

    ಕೋವಿಡ್ ಬಗ್ಗೆ ಲಂಡನ್ ಕನ್ನಡತಿ ಡಾ. ಪ್ರೇಮಲತ ಬರೆಯುತ್ತಿದ್ದ ಈ ಅಂಕಣ ಈ ಬರಹದೊಂದಿಗೆ ಮುಕ್ತಾಯ ಕಾಣುತ್ತಿದೆ. ಬಹುಶ: ಕನ್ನಡ ಪತ್ರಿಕೋದ್ಯಮದಲ್ಲಿ ಕೋವಿಡ್ ಬಗ್ಗೆ ಇಷ್ಟು ಸಮಗ್ರವಾಗಿ ಅಧ್ಯಯನ ಶೀಲ ಲೇಖನ ಮಾಲೆ ಎಲ್ಲಿಯೂ ಪ್ರಕಟವಾದ ಉದಾಹರಣೆ ಇಲ್ಲ. ಕನ್ನಡಪ್ರೆಸ್.ಕಾಮ್ ನ ಮೇಲೆ ಅಭಿಮಾನವಿಟ್ಟು ಈ ಲೇಖನ ಮಾಲೆ ಬರೆದು ಕೊಟ್ಟ ಡಾ. ಪ್ರೇಮಲತ ಅವರಿಗೆ ಓದುಗರ ಪರವಾಗಿ ಧನ್ಯವಾದ.

    ಈ ಆರು ತಿಂಗಳಲ್ಲಿ ಒಂದು ವಾರವೂ ತಪ್ಪದೇ ಡಾ. ಪ್ರೇಮಲತ ಬರೆದಿದ್ದಾರೆ. ಅಂಕಣ ಎಂದ ಕೂಡಲೇ ಅಂಕಣಕಾರರಿಂದ ಅದನ್ನು ಪಡೆಯುವುದೆ ಸಂಪಾದಕರಿಗೆ ಸವಾಲು. ಅಂಕಣ ಬರೆಯಲು ಆರಂಭಿಸಿದಾಗ ಇರುವ ಉತ್ಸಾಹ ಕೆಲವವರಲ್ಲಿ ನಾಲ್ಕು ಕಂತು ಬರೆಯುವ ವೇಳೆಗೆ ಕಡಿಮೆಯಾಗಿರುತ್ತದೆ. ಸಂಪಾದಕರು ನೆನಪಿಸಿ ನೆನಪಿಸಿ ಅಂಕಣ ಪಡೆಯಬೇಕಾಗುತ್ತದೆ. ಇದು ನನ್ನ ಮೂವತ್ತು ವರುಷಗಳ ಪತ್ರಿಕೋದ್ಯಮದ ಅನುಭವ. ಆದರೆ ಅಂಕಣಕಾರರಾಗಿ ಪ್ರೇಮಲತ ಒಂದು ದಿನವೂ ತಡಮಾಡಲಿಲ್ಲ. ಎರಡೂ ದಿನ ಮೊದಲೆ ಅಂಕಣ ಬರಹ ನಮ್ಮ ಕೈ ಸೇರುತ್ತಿತ್ತು.

    ನಮ್ಮ ಓದುಗರು ಈ ಲೇಖನ ಮಾಲೆಯನ್ನು ಮೆಚ್ಚಿಕೊಂಡಿದ್ದಾರೆ. ಅನೇಕರು ಪ್ರತಿಕ್ರಿಯೆಗಳನ್ನು ಬರೆದಿದ್ದಾರೆ. ಅವರೆಲ್ಲಿರಿಗೂ ಧನ್ಯವಾದ. ಮತ್ತೊಂದು ಹೊಸ ವಿಷಯ ದೊಂದಿಗೆ ಡಾ. ಪ್ರೇಮಲತ ಅವರ ಅಂಕಣ ಸಧ್ಯದಲ್ಲೇ ನಿರಿಕ್ಷಿಸೋಣ.

    ಶ್ರೀವತ್ಸ ನಾಡಿಗ್, ಪ್ರಧಾನ ಸಂಪಾದಕ

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    4 COMMENTS

    1. ನಿಮ್ಮ ಕೋವಿಡ್ ಲೇಖನ ಸರಣಿ ಶ್ರೇಷ್ಠ ಮಾಹಿತಿ ನೀಡಿವೆ. ತಲ್ಲಣಗೊಂಡವರಿಗೆ ಭರವಸೆ ನೀಡಿವೆ. ಮಾರ್ಗಸೂಚಿಗಳು ಉಪಯುಕ್ತ ವಾಗಿವೆ.

    2. Nice article Dr. Premalatha! I am glad to connect to you through this article again! Dr. Srikanth Kulkarni, Bengaluru!

    3. ಕೊವಿಡ್ ಬಗ್ಗೆ ಮಾಹಿತಿ, ತಿಳಿದು ಕೊಲ್ಲಬೆಕಾದಮಾಹಿತಿ, ತೆಗೆದುಕೊಳ್ಳ ಬೇಕಾದ ಎಚ್ಚರಿಕೆ ಗಳನ್ನು ವಿವರಿಸಿರುವುದು ಸೂಕ್ತ ಹಾಗು ವಾಸ್ತವಿಕತೆಗೆ ಅಗತ್ಯವಾಗಿದೆ. ತಮಗೆ ಧನ್ಯವಾದಗಳು ಡಾ. ಪ್ರೇಮಲತ ಅವರಿಗೆ🙏

    4. ಕೋವಿಡ್ ಡೈರಿ ಅಂಕಣದಿಂದ ನಿಜಕ್ಕೂ ನಾವೆಲ್ಲ ತುಂಬಾ ಲಾಭ ಪಡೆದುಕೊಂಡೆವು ಮೇಡಂ. ಎಲ್ಲಾ ಲೇಖನಕ್ಕೂ comment ಹಾಕದೆ ಇರಬಹುದು ಆದರೆ ಪ್ರತಿ ಲೇಖನವನ್ನೂ ಓದಿದ್ದೇನೆ ನಿಮ್ಮ ಜ್ಞಾನಕ್ಕೆ ನನ್ನ ನಮನಗಳು.

      ಈಗ ಆ ಸರಣಿ ಮುಗಿಯುತ್ತಿದೆ ಎಂದು ಕೇಳಿ ನಿಜಕ್ಕೂ ಬೇಸರವಾಯಿತು ಹಾಗೆಯೇ ಒಂದು ಆಸೆಯೂ ಚಿಗುರಿತು, ‘ನಿಮ್ಮ ಕೋವಿಡ್ ಸರಣಿ ಮುಕ್ತಾಯವಾದಂತೆ ಕೋವಿಡ್ ವೈರಸ್ ನ ಅಟ್ಟಹಾಸ ಸಹ ಕೊನೆಗೊಳ್ಳಲಿ ಎಂದು ಆಶಿಸುತ್ತೇನೆ.

      ಸಂಪಾದಕರು ಹೇಗೂ ಭರವಸೆಯನ್ನು ಕೊಟ್ಟಿದ್ದಾರೆ, ಮತ್ತೊಂದು ಹೊಸ ಅಂಕಣದೊಂದಿಗೆ ತಾವು ಕನ್ನಡ ಪ್ರೆಸ್ ಡಾಟ್ ಕಾಂಗೆ ಬರುವಿರಿ ಎಂದು ಅದರ ನಿರೀಕ್ಷೆಯಲ್ಲಿದ್ದೇನೆ. ನೀವು ಡೆಂಟಿಸ್ಟ್ ಆಗಿರುವುದರಿಂದ ಆ ವಿಷಯದ ಬಗ್ಗೆ ನಿಮ್ಮ ಅಂಕಣ ನಿರೀಕ್ಷಿಸಬಹುದೇ………? ತುಂಬು ಹೃದಯದ ಧನ್ಯವಾದಗಳು ಡಾಕ್ಟರ್ 🙏

      ಸಂತೋಷ್ ಸಸಿಹಿತ್ಲು ಅವರ ಕಲೆ ಲೇಖನಕ್ಕೆ ಪೂರಕವಾಗಿದೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!