31.5 C
Karnataka
Saturday, May 11, 2024

    ಅಮೆರಿಕಾ ಚುನಾವಣೆ ಹೇಗೆ ನಡೆಯುತ್ತೆ ಗೊತ್ತಾ

    Must read

    ಇವತ್ತು ಅಮೆರಿಕಾ ಮಹಾ ಚುನಾವಣೆಯ ಫಲಿತಾಂಶ ಗೊತ್ತಾಗುವ ನಿರೀಕ್ಷೆ ಇದೆ. ಯಾರಾಗಬಹುದು ಅಮೆರಿಕದ ಅಧ್ಯಕ್ಷ ಎಂಬ ಸಂಗತಿ  ತೀವ್ರ ಕುತೂಹಲ ಕೆರಳಿಸಿದೆ. ಹಲವು ರಾಜ್ಯಗಳು ಒಂದೊಂದು ರೀತಿಯ ಫಲಿತಾಂಶವನ್ನು ನೀಡುತ್ತಾ ಬರುತ್ತಿವೆ. ಕೆಲವು ಕಡೆ ಬಿಡೆನ್ ಮತ್ತೊದು ಕೆಲವು ಕಡೆ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಈ ಬಾರಿ ಇ ಮೇಲ್ ಮತಗಳು ಇರುವುದರಿಂದ ಕೆಲವು ಪ್ರಾಂತ್ಯಗಳಲ್ಲಿ ಎಣಿಕೆ ತಡವಾಗಿದೆ.   ಹಾಗೆ ನೋಡಿವ ದರೆ ಅಮೆರಿಕಾ ಚುನಾವಣೆ ಸ್ವಲ್ಪ ಕಾಂಪ್ಲಿಕೇಟಡ್.  ಅಲ್ಲಿನ ಸಂವಿಧಾನ ಕರ್ತೃಗಳು ಹಲವು ರೀತಿಯ ಬ್ಯಾಲನ್ಸ್ ಮತ್ತು ಚೆಕ್ ಗಳನ್ನು ಅಳವಡಿಸಿದ್ದಾರೆ. ಇಂದಿನ ಫಲಿತಾಂಶ ಸ್ಪಷ್ಟ ರೂಪ ಪಡೆಯುವ ಮುನ್ನ ಅಮೆರಿಕ ಚುನಾವಣೆ ಹೇಗೆ ನಡೆಯುತ್ತದೆ ಎಂಬುದನ್ನು ನೋಡೋಣ.

    ಅಲ್ಲಿನ ಚುನಾವಣೆ ನಮಗಿಂತ ಹೇಗೆ ಭಿನ್ನ?

    ನಮ್ಮಲ್ಲಿ  ಪ್ರಧಾನ ಮಂತ್ರಿ ಇದ್ದ ಹಾಗೆ ಅಲ್ಲಿ ಅಧ್ಯಕ್ಷ. ಅಮೆರಿಕನ್ ಪ್ರೆಸಿಂಡೆಂಟ್ ಎಂಬುದು ವಿಶ್ವದಲ್ಲೇ ಅತ್ಯಂತ ಪವರ್ ಫುಲ್ ಹುದ್ದೆಗಳಲ್ಲಿ ಒಂದು. ನಮ್ಮದು  ಸಂಸದೀಯ ಜನತಂತ್ರ ವ್ಯವಸ್ಥೆ. ಇಲ್ಲಿ ಸರಕಾರದ ಮುಖ್ಯಸ್ಥ ಜನರಿಂದ ನೇರವಾಗಿ ಆಯ್ಕೆಯಾಗುವುದಿಲ್ಲ.  ನಾವು ನಮ್ಮ ಪ್ರಧಾನಿಗೆ ನೇರವಾಗಿ ವೋಟ್ ಮಾಡಿ ಗೆಲ್ಲಿಸಿದ್ದಾವ ಇಲ್ಲ. ಅವರನ್ನು ಆಯ್ಕೆ ಮಾಡಿದ್ದು ವಾರಾಣಾಸಿ ಮತದಾರರು .ನಾವು ನಮ್ಮ ಕ್ಷೇತ್ರದ ಎಂಪಿ ಗಳಿಗೆ ವೋಟ್ ಮಾಡಿದೆವು.  ಅತಿ ಹೆಚ್ಚು ಎಂಪಿಗಳನ್ನು ಪಡೆದ ಬಿಜೆಪಿ ಅಧಿಕಾರಕ್ಕೆ ಬಂತು. ಆ ಪಕ್ಷದ ಸಂಸದರೆಲ್ಲಾ ಸೇರಿ ಆಯ್ಕೆ ಮಾಡಿದ ನರೇಂದ್ರ ಮೋದಿ  ಪ್ರಧಾನ ಮಂತ್ರಿ ಆದರು.

    ಆದರೆ ಅಮೆರಿಕಾದಲ್ಲಿ ಹಾಗಲ್ಲ. ಅಲ್ಲಿ ಅಧ್ಯಕ್ಷರಿಗೆ ಪರಮಾಧಿಕಾರ. ನೇರವಾಗಿ ನಾಗರಿಕರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ವೋಟ್ ಮಾಡುತ್ತಾರೆ.ಬಾಲೆಟ್ ಪೇಪರ್ ನಲ್ಲಿ ಅವರ ಹೆಸರೇ ಮುದ್ರಿತವಾಗಿರುತ್ತದೆ.

    ಅಂದರೆ ಜನರಿಂದ ಹೆಚ್ಚು ವೋಟು  ಪಡೆದವರೆ  ಅಮೆರಿಕನ್ ಪ್ರೆಸಿಡೆಂಟ್ ಆಗಿಬಿಡ್ತಾರ?

    ಈ ಪ್ರಶ್ನೆಗೆ ನನ್ನ ಉತ್ತರ ಇಲ್ಲ. ಉದಾಹರಣೆಗೆ  ಒಟ್ಟು ಮತದಾರರ ಸಂಖ್ಯೆ 1000 ಎಂದು ಇಟ್ಟು ಕೊಳ್ಳಿ. ಅದರಲ್ಲಿ ಒಬ್ಬ ಅಭ್ಯರ್ಥಿಗೆ  600 ವೋಟು ಬಂತು ಎಂದು ಭಾವಿಸಿ. ಅಂದರೆ ಎದುರಾಳಿಗಿಂತ 100 ಅಧಿಕ, ಪಡೆದವನೆ ಗೆದ್ದ ಎಂದು ಘೋಷಣೆ ಆಗಬೇಕಲ್ಲವೆ.  ಆದರೆ ಇಲ್ಲಿ ಹಾಗೆ ಆಗುವುದಿಲ್ಲ.  ವೋಟ್ ಪರಸಂಟೇಜ್  ಹೆಚ್ಚು ಬಂದ ಮಾತ್ರಕ್ಕೆ  ಆತ ಅಧ್ಯಕ್ಷ ಪಟ್ಟ ಗಿಟ್ವುವುದಿಲ್ಲ.   ನಮ್ಮಲ್ಲಿ ಸಿದ್ಧರಾಮಯ್ಯ ಹೇಳುತ್ತಿರುತ್ತಾರಲ್ಲ  ಬಿಜೆಪಿ ಗಿಂತ ವೋಟಿಂಗ್ ಪರ್ಸಂಟೇಜ್  ನಮಗೆ ಜಾಸ್ತಿ ಅಂತ. ಈ  ಪರ್ಸಂಟೇಜ್ ವೋಟುಗಳು   ಸೀಟುಗಳಾಗಿ ಬದಲಾಗದೆ ಹೋದಾಗ ಅಧಿಕಾರ ಗಿಟ್ಟುವುದಿಲ್ಲ. ಅಲ್ಲೂ ಹೆಚ್ಚು ಕಡಿಮೆ ಹೀಗೆಯೇ.

    ಅಂದರೆ ಹೆಚ್ಚಿನ ವೋಟು ಬಂದರು ಅಧಿಕಾರ ಸಿಗುವುದಿಲ್ಲವೆ?

    ಸಿಗುವುದಿಲ್ಲ ಎಂದಲ್ಲ.  ವಾಸ್ತವವಾಗಿ ಅಮೆರಿಕನ್ನರು  ಟ್ರಂಪ್‌ಗೋ ಬಿಡನ್ ಗೋ ಮತ  ಹಾಕಿದರೆ  ಅದು ನೇರವಾಗಿ ಅವರಿಗೆ ಹಾಕಿದಂತಲ್ಲ.  ವಾಸ್ತವವಾಗಿ ಆ ಮೂಲಕ ಅವರು ಆಯ್ಕೆ ಮಾಡುವುದು ಪ್ರೆಸಿಂಡೆಂಟ್ ಆಯ್ಕೆಯಲ್ಲಿ ವೋಟು ಮಾಡಲು ಹಕ್ಕು ಹೊಂದಿರುವ   ಎಲೆಕ್ಟ್ರೋಲ್ ಕಾಲೇಜನ್ನು .. ಎಲೆಕ್ಟ್ರೋಲ್ ಕಾಲೇಜ್ ಅಂದ ಕೂಡಲೆ ಕಾಲೇಜು ಎಂದು ಕೊಳ್ಳಬೇಡಿ ಅದನ್ನುಮತದಾರರ ಒಂದು ಗುಂಪು ಎಂದು ಭಾವಿಸಿಕೊಳ್ಳಿ, ಈ ಗುಂಪೇ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡುವುದು.

    ಏನಿದು ಎಲೆಕ್ಟ್ರೋಲ್ ಕಾಲೇಜ್?

     ಅಮೆರಿಕದಲ್ಲಿ  50 ರಾಜ್ಯಗಳಿವೆ. ಪ್ರತಿಯೊಂದು ರಾಜ್ಯದಿಂದ ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಈ ‌ಎಲೆಕ್ಟರ್ ಗಳ (ಜನರ ಪರವಾಗಿ ವೋಟು ಮಾಡುವ ಪ್ರತಿನಿಧಿ) ಸಂಖ್ಯೆ ನಿಗದಿಯಾಗಿರುತ್ತದೆ.  ಉದಾಹರಣೆಗೆ ಕ್ಯಾಲಿಫೋರ್ನಿಯ ರಾಜ್ಯ. ಇದು 55 ಎಲೆಕ್ಟರ್ ಗಳನ್ನು ಹೊಂದಿದೆ. ಅದೇ ರೀತಿ ನಾರ್ತ್ ಡಕೋಟ, ವಾಷಿಂಗ್ಟನ್ ಡಿಸಿ ಯಂಥ ರಾಜ್ಯಗಳು ಕೇವಲ 3  ಎಲೆಕ್ಟರ್ ಗಳನ್ನು ಹೊಂದಿದೆ. ಎಲ್ಲಾ 50 ರಾಜ್ಯಗಳು ಸೇರಿ ಇವರ ಸಂಖ್ಯೆ 538 ಅದರಲ್ಲಿ 270 ಮತ್ತು  ಅದಕ್ಕಿಂತ ಹೆಚ್ಚು ಎಲೆಕ್ಟರ್ ಗಳ (ಪ್ರತಿನಿಧಿ) ವೋಟ್‌ ಪಡೆದವರು ಅಧ್ಯಕ್ಷರಾಗುತ್ತಾರೆ. ಎಲೆಕ್ಟರ್ ಗಳು ಬೇರೆ ಜನಪ್ರತಿನಿಧಿಗಳಂತೆ ಅಲ್ಲ. ಅಧ್ಯಕ್ಷ/ ಉಪಾಧ್ಯಕ್ಷ ಚುನಾವಣೆಯಲ್ಲಿ ವೋಟು ಮಾಡಿದ ನಂತರ ಇವರ ಕೆಲಸ ಮುಗಿಯಿತು.

    ಎಲೆಕ್ಟರ್ ಗಳ ಆಯ್ಕೆ ಹೇಗೆ?

    ಚುನಾವಣೆ ಪೂರ್ವದಲ್ಲಿ ಆಯಾ ಪಕ್ಷಗಳು ತಮ್ಮ ಕಡೆಯ ಎಲೆಕ್ಟರ್ ಗಳನ್ನು ಆಂತರಿಕ ಮತದಾನದ ಮೂಲಕ ಆಯ್ಕೆ ಮಾಡಿರುತ್ತಾರೆ. ಸಾಮಾನ್ಯವಾಗಿ ಇವರು ಆಯಾ ಪಕ್ಷಗಳ ನಿಷ್ಠರು, ಸಮಾಜದ ಗಣ್ಯರು, ಕಾರ್ಯಕರ್ತರು ಆಗಿರುತ್ತಾರೆ. ( ನಮ್ಮಲ್ಲಿ ನಿಗಮ ಮಂಡಳಿ, ವಿಧಾನ ಪರಿಷತ್ ಗೆ ನೇಮಕ ಮಾಡುತ್ತಾರಲ್ಲ ಹಾಗೆ ) ಆದರೆ ಇವರು ಸರಕಾರದ ಯಾವುದೇ ಲಾಭದಾಯಕ ಹುದ್ದೆ ಹೊಂದಿರುವಂತಿಲ್ಲ. ಅಧ್ಯಕ್ಷ/ ಉಪಾಧ್ಯಕ್ಷ ಚುನಾವಣೆಯಲ್ಲಿ ವೋಟು ಹಾಕುವುದಷ್ಟೆ ಇವರ ಕೆಲಸ.  ಇವರು ಅಲ್ಲಿನ ಸೆನೆಟ್ / ಹೌಸ್ (ನಮ್ಮಲ್ಲಿ ಲೋಕಸಭೆ /ರಾಜ್ಯಸಭೆ ಇದ್ದಂತೆ) ಸದಸ್ಯರು ಆಗಿರುವಂತಿಲ್ಲ.

    ಆಯಾ ರಾಜ್ಯದಲ್ಲಿ ಶೇಕಡ 50ಕ್ಕಿಂತ ಹೆಚ್ಚಿನ ಮತವನ್ನು  ಪಡೆಯುವ ಅಧ್ಯಕ್ಷ/ ಉಪಾಧ್ಯಕ್ಷ  ಹುದ್ದೆಯ ಅಭ್ಯರ್ಥಿಯ ಪಕ್ಷ ಕ್ಕೆ ಆ ರಾಜ್ಯದ  ಎಲೆಕ್ಟರ್ ಹುದ್ದೆಗಳು ಸಿಗುತ್ತವೆ. ಉದಾಹರಣೆಗೆ  ಈ ಬಾರಿ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ  55 ಎಲೆಕ್ಟರ್ ಮತಗಳಿವೆ.  ಅಲ್ಲಿ ಈ ಬಾರಿ ಜಾನ್ ಬಿಡೆನ್ ಶೇಕಡ 65.3  ರಷ್ಟು ಮತ ಪಡೆದಿದ್ದಾರೆ. ಹೀಗಾಗಿ ಅಲ್ಲಿನ 55 ಎಲೆಕ್ಟರ್ ಮತಗಳು  ಬಿಡೆನ್ ಪಕ್ಷದ ಪಾಲಾಗುತ್ತದೆ. ಅದೇ ರೀತಿ ಫ್ಲೋರಿಡಾದಲ್ಲಿ ಟ್ರಂಪ್ ಶೇಕಡ 51.2 ರಷ್ಟು ಜನರ ಮತ ಪಡೆದಿದ್ದಾರೆ. ಹೀಗಾಗಿ ಅಲ್ಲಿರುವ ಎಲ್ಲಾ 29 ಎಲೆಕ್ಟರ್ ಸೀಟುಗಳು ಟ್ರಂಪ್ ಪಾಲಾಗುತ್ತವೆ. ಆದರೆ ಮೈನ್ ಮತ್ತು ನೆಬಸ್ಕಾ ರಾಜ್ಯಗಳು ಮಾತ್ರ ಅವರು ಪಡೆಯುವ ಮತಗಳ ಸಂಖ್ಯೆಯ ಆಧಾರದ ಮೇಲೆ ಎಲೆಕ್ಟರ್ ಗಳ ಸಂಖ್ಯೆಯನ್ನು ಹಂಚುತ್ತವೆ.

    ಜನರಿಂದ ಬಹುಮತ ಗಳಿಸದಿದ್ದರೂ ಅಧ್ಯಕ್ಷರಾಗಬಹುದೆ ?

    ಆಗಬಹುದು. ಒಟ್ಟಾರೆ ಮತಗಳು ಹೆಚ್ಚಿಗೆ ಬಂದು ಎಲೆಕ್ಟರ್ ಗಳ ಸಂಖ್ಯೆ ಕಡಿಮೆಯಾದಾಗ ಆತ ಗೆಲ್ಲುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ಒಬ್ಬ ಅಭ್ಯರ್ಥಿಗೆ ಒಂದು ರಾಜ್ಯದಲ್ಲಿ ಶೇಕಡ 100 ಮತಗಳು ಬಂದಿರುತ್ತವೆ. ಆದರೆ ಅಲ್ಲಿನ ಜನಸಂಖ್ಯೆ ಅನುಗುಣವಾಗಿ ಅಲ್ಲಿನ ಎಲೆಕ್ಟರ್  ಸಂಖ್ಯೆ ಕಡಿಮೆ ಇರುತ್ತದೆ. ಇನ್ನೊಂದು ರಾಜ್ಯದಲ್ಲಿ ಎಲೆಕ್ಟರ್ ಗಳ ಸಂಖ್ಯೆ ಜಾಸ್ತಿ ಇರುತ್ತದೆ.  ಅಲ್ಲಿ ಮತ್ತೊಬ್ಬ ಅಭ್ಯರ್ಥಿ ಕೇವಲ 51 ರಷ್ಟು  ಮತ ಪಡೆದಿರುತ್ತಾನೆ. ಆದರೆ  ಇಲ್ಲಿನ  ಎಲೆಕ್ಟರ್ ಸಂಖ್ಯೆ 30 ಹೀಗಾಗಿ  ಆತನ ನಂಬರ್ ಹೆಚ್ಚಾಗುತ್ತದೆ. ನಮ್ಮಲ್ಲಿ ಉತ್ತರ ಪ್ರದೇಶದಲ್ಲಿ  ಹೆಚ್ಚು ಎಂಪಿಗಳನ್ನು ಪಡೆದವರು ಅಧಿಕಾರಕ್ಕೆ ಬರುವುದಿಲ್ಲವೆ ಹಾಗೆ. 2016ರಲ್ಲಿ ಟ್ರಂಪ್ ಗೆ  ಒಟ್ಟಾರೆ  ಹಿಲರಿ ಕ್ಲಿಂಟನ್ ಗಿಂತ 3 ಮಿಲಿಯನ್  ವೋಟುಗಳು ಕಡಿಮೆ ಬಂದಿದ್ದವು. ಆದರೆ  ಎಲೆಕ್ಟರ್ ಗಳ  ಸಂಖ್ಯೆ ಹೆಚ್ಚಿರುವ ರಾಜ್ಯದಲ್ಲಿ ಟ್ರಂಪ್ ಗೆದ್ದಿದ್ದರಿಂದ   ಒಟ್ಟು ಎಲೆಕ್ಟರ್ ಗಳ  ಸಂಖ್ಯೆ ಪಡದು ಆತ ಅಧ್ಯಕ್ಷನಾದ.

    ಏಕೆ ಈ  ಪದ್ಧತಿ?

    1787 ರಲ್ಲಿ ಅಮೆರಿಕದ ಸಂವಿಧಾನ ಸಿದ್ಧವಾದಾಗ  ಇಡೀ ದೇಶದ ಜನರ ವೋಟುಗಳನ್ನೆಲ್ಲಾ ಲೆಕ್ಕಹಾಕಿ ಅಧ್ಯಕ್ಷರನ್ನು ಆಯ್ಕೆ ಮಾಡುವುದು ದೇಶದ ವಿಸ್ತಾರದ ದೃಷ್ಟಿಯಿಂದ ಕಷ್ಟವಾಗಿತ್ತು. ಅದಲ್ಲದೆ ಸಣ್ಣ ರಾಜ್ಯಗಳು ತಮ್ಮ ಜನಸಂಖ್ಯೆ ಆಧಾರದ ಮೇಲೆ ಮತ ಹಾಕುವಾಗ ಈ ಪದ್ಧತಿ ಇದ್ದರೆ ತಮ್ಮ ರಾಜ್ಯದ ಮಾತು ಕೂಡ   ವಾಷಿಂಗ್ ಟನ್ ನಲ್ಲಿ ನಡೆಯುತ್ತದೆ ಎಂದು ಭಾವಿಸಿದವು. ಜನಸಂಖ್ಯೆ ಆಧರಿಸಿ ಎಲೆಕ್ಟರ್  ಸಂಖ್ಯೆ ನಿರ್ಧಾರವಾಗುವುದಿರಂದ ಆಯಾ ರಾಜ್ಯಗಳು ತಮ್ಮ ರಾಜ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ . ಇಲ್ಲದ್ದಿದ್ದರೆ ಹೆಚ್ಚಿನ ಮತದಾರರಿರುವ ರಾಜ್ಯಗಳ ಮಾತೇ ನಡೆದು ಬಿಡಬಹುದು ಎಂದು ಭಾವಿಸಿ ಈ ಪದ್ದತಿ ಒಪ್ಪಿದವು.

    ಎಲೆಕ್ಟರ್ ಗಳು  ಅತಿ ಹೆಚ್ಚಿನ ಮತ ಗೆದ್ದವರಿಗೆ ವೋಟು  ಹಾಕಬೇಕೇ?

    ಹಾಗೇನು ಇಲ್ಲ. ಒಂದು ಪ್ರಾತ್ಯದಲ್ಲಿ ಡೆಮಾಕ್ಟ್ರಾಟಿಕ್  ಪಕ್ಷದ ವತಿಯಿಂದ ನೇಮಕವಾದ ಎಲೆಕ್ಟರ್ ಗಳು ಅಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗೆ  ಮತಹಾಕಬಹುದು. ಆದರೆ ಅಂಥ ಸಂಭವ ಕಡಿಮೆ. ಈ ರೀತಿ ಮತ ಹಾಕಿದವರವನ್ನು ಜನ  ಫೇತ ಲೆಸ್ ಎಲೆಕ್ಟರ್ಸ್ ಎಂದು ಕರೆಯುತ್ತಾರೆ. 2016ರಲ್ಲಿ ಡೆಮಾಕ್ರಾಟಿಕ್ ಪಕ್ಷದ ಐವರು, ರಿಪಬ್ಲಿಕನ್ ಪಕ್ಷದ ಇಬ್ಬರು  ಎಲೆಕ್ಟರ್ ಗಳು ತಮ್ಮ ಪಕ್ಷದ ಅಣತಿಯನ್ನು ಮೀರಿ  ಬಾಲೆಟ್ ಪೇಪರ್ ನಲ್ಲೇ ಇಲ್ಲದ ವ್ಯಕ್ತಿಗಳಿಗೆ ಮತಹಾಕಿದ್ದರು.  ಎಲೆಕ್ಟರಲ್ ಗಳ ಜನರ ವಿಶ್ವಾಸಕ್ಕೆ ಭಂಗ ತರದಂತೆ ನೋಡಿಕೊಳ್ಳುವ ಹೊಣೆ ಆಯಾ ರಾಜ್ಯಗಳದ್ದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ.

    ಯಾರಿಗೂ ಬಹುಮತ ಬರದಿದ್ದರೆ ಏನಾಗುತ್ತದೆ?

    ಇಂಥ ಸಮಯದಲ್ಲಿ ಈ ಎಲೆಕ್ಟರ್ ಗಳ  ಮತ ಲೆಕ್ಕಕ್ಕೆ ಬರುವುದಿಲ್ಲ. ಆಗ ಜನರಿಂದ ನೇರ ಆಯ್ಕೆ ಯಾಗಿರುವ ನಮ್ಮ ಲೋಕಸಭೆ ಮಾದರಿಯ  ಹೌಸ್ ಆಫ್ ರೆಪ್ರಸೆಂಟಿಟಿವ್ ನ ಸದಸ್ಯರು ಮತ ಹಾಕಿ ‌ಅಧ್ಯಕ್ಷ ರನ್ನು ಆಯ್ಕೆ ಮಾಡುತ್ತಾರೆ. ಉಪಾಧ್ಯಕ್ಷರನ್ನು ಹೊಸದಾಗಿ ಆಯ್ಕೆಯಾದ ಸೆನೆಟ್ ಮಾಡುತ್ತದೆ. ಅಮೆರಿಕ ಇತಿಹಾಸದಲ್ಲಿ ಒಮ್ಮೆ ಮಾತ್ರ 1824ರಲ್ಲಿ ಈ ರೀತಿ ಆಗಿತ್ತು.

    ಅಧಿಕೃತ ಫಲಿತಾಂಶ ಯಾವತ್ತು?

    ಡಿಸೆಂಬರ್ 14ರಂದು ಎಲೆಕ್ಟ್ರೋಲ್ ಕಾಲೇಜಿಗೆ ಆಯ್ಕೆಯಾಗಿರುವ  ಎಲೆಕ್ಟರ್ ಗಳು ಮತ ಹಾಕುತ್ತಾರೆ. ಜನವರಿ 6ರಂದು ಅಮೆರಿಕನ್ ಕಾಂಗ್ರೆಸ್ (ನಮ್ಮ ಸಂಸತ್ತಿನ ರೀತಿ) ಮಧ್ಯಾಹ್ನ 1 ಗಂಟೆಗೆ ಸೇರಿ ಎಲೆಕ್ಟ್ರಲ್ ಗಳ ಮತವನ್ನು ಲೆಕ್ಕ ಹಾಕಿ ವಿಜಯಿಯನ್ನು ಘೋಷಿಸುತ್ತದೆ.  2021 ರ ಜನವರಿ 20 ರಂದು ನೂತನ ಅಧ್ಯಕ್ಷರ ಪದಗ್ರಹಣ ಆಗುತ್ತದೆ.

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    11 COMMENTS

    1. ಬಹಳ ಸರಳವಾಗಿ ಸಾಮಾನ್ಯನಿಗೆ ಅರ್ಥ ವಾಗುವ ಹಾಗೆ ವಿವರಿಸಿದ್ದೀರಿ… ನಿಜ ಹೇಳಬೇಕೆಂದರೆ ಸಾಕಷ್ಟು ವಿದ್ಯಾವಂತರಿಗೂ ಇದು ಆರ್ಥ ಆಗಲ್ಲ.ಕೃತಜ್ಞತೆಗಳು. ಗ್ರಾಫಿಕ್ಸ್ / ಚಾರ್ಟ್ ಮೂಲಕ ತಿಳಿಸಿದ್ದಾರೆ ಇನ್ನಷ್ಟು ಚೆನ್ನಾಗಿ ಇರೋದು.

    2. Nice….18ನೇ ಶತಮಾನದ ಮಾದರಿಯಲ್ಲೇ ಇಂದೂ ಅಮೆರಿಕದ ಚುನಾವಣೆ ವರ್ಷ ಇಡೀ ನಡೆಯುವುದರ ಕುರಿತು ಹೇಳಿದ್ದರೆ ಚೆನ್ನಿರುತ್ತಿತ್ತು ಅಂತ ನನ್ನ ಅಭಿಪ್ರಾಯ. ಲೇಖಕರ ಅನುಮತಿಯೊಂದಿಗೆ ಅದನ್ನ ಇಲ್ಲಿ ಹೇಳ ಬಯಸುತ್ತೇನೆ.

      ಸಂಪರ್ಕ ವ್ಯವಸ್ಥೆ ಆಧುನಿಕತೆ ಹೊಂದಿಲ್ಲದ ಕಾರಣ ದೂರದ ರಾಜ್ಯಗಳಿಂದ ಮತ ಪೆಟ್ಟಿಗೆ ನ್ಯೂಯಾರ್ಕ್ ತಲುಪಲು ಸಮಯ ಬೇಕಾಗುತ್ತಿತ್ತು….ಹಾಗಾಗಿ 4 ವರ್ಷದ ಅವಧಿಯ ಚುನಾವಣೆಯಲ್ಲಿ ಕೊನೆಯ ಒಂದು ವರ್ಷ ಚುನಾವಣೆ ಗೆ ಮೀಸಲು!!!

      ಅದೇ ಪದ್ದತಿ ಈಗಲೂ ಅಮೇರಿಕಾದಲ್ಲಿ ಇದೆ ಅಂದ್ರೆ, ಅವರು ತಮ್ಮ ತನವನ್ನು ಎಷ್ಟು ಪ್ರೀತಿಸ್ತಾರೆ ಅಂತ ನನಗೆ ತುಂಬಾ ಗೌರವ ಆಗ್ತದೆ.

      ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಈ ಎಲ್ಲ ಪ್ರಕ್ರಿಯೆ ತಿಂಗಳಲ್ಲಿ ಮುಗಿಸಬಹುದಾದ್ರು, ಅವರು ಮಾಡಲು ಓಪ್ಪಲ್ಲ … I simply love that!!!

    3. ಕತ್ತೆ ಡೆಮಾಕ್ರಾಟಿಕ್ ಪಕ್ಷದ ಚಿಹ್ನೆ….ಆಗ ಕತ್ತೆ ಗಳೇ ಈ ಮತಪೆಟ್ಟಿಗೆ ಹೊತ್ತು ತರುತ್ತಿದ್ದದು….

      • ಸರಳವಾಗಿ ವಿವರವಾಗಿ ವಿವರಿಸಿದ್ದೀರಿ. ತುಂಬಾ ಜನರಿಗೆ ಅಮೇರಿಕದ ಚುನಾವಣೆ ಅರ್ಥವಾಗುವುದಿಲ್ಲ. ಭಾರತದ ಚುನಾವಣೆ ಬೇರೆಯಾರಿಗೆ ಅರ್ಥವಾಗುವುದಿಲ್ಲ.

    4. ಸರಳ, ನೇರ ,ದಿಟ್ಟ ಮತ್ತು ಸಮಗ್ರ ಮಾಹಿತಿ ಇರುವ ಲೇಖನ ಚೆನ್ನಾಗಿದೆ

    5. ಸಾರ್ ಬಹಳ ಸರಳವಾಗಿ ಸಾಮಾನ್ಯನಿಗೆ ಅರ್ಥ ವಾಗುವ ಹಾಗೆ ವಿವರಿಸಿದ್ದೀರಿ… ನಿಜ ಹೇಳಬೇಕೆಂದರೆ ಸಾಕಷ್ಟು ವಿದ್ಯಾವಂತರಿಗೂ ಇದರ ಬಗ್ಗೆ ಅಷ್ಟು ಆರ್ಥ ಆಗಲ್ಲ.
      ಕೃತಜ್ಞತೆಗಳು ಸಾರ್…. ಗ್ರಾಫಿಕ್ಸ್ / ಚಾರ್ಟ್ ಮೂಲಕ ತಿಳಿಸಿದ್ದಾರೆ ಇನ್ನಷ್ಟು ಚೆನ್ನಾಗಿ ಇರೋದು.

    6. ಸಮಗ್ರವಾಗಿದೆ ..ಅಮೆರಿಕ ಅಧ್ಯಕ್ಷರು ಎಂದರೆ ಜಗತ್ತಿನಲ್ಲೇ ವಿಶೇಷ.. ಆಯ್ಕೆ ಯ ಕುರಿತು ನಿಜಕ್ಕೂ ಮಾಹಿತಿ ಇರಲಿಲ್ಲ.
      ವಿಭಿನ್ನ ವಿಷಯವೊಂದನ್ನು ತಿಳಿದುಕೊಂಡಂತಾಯ್ತು.

    7. ಆಯ್ಕೆ ಪ್ರಕ್ರಿಯೆ ಸಮಗ್ರ ಚಿತ್ರಣ ಲೇಖನದಲ್ಲಿ ಸರಳವಾಗಿ ಅರ್ಥವಾಗುತ್ತದೆ

    LEAVE A REPLY

    Please enter your comment!
    Please enter your name here

    Latest article

    error: Content is protected !!