23.5 C
Karnataka
Friday, May 10, 2024

    ಕೋವಿಡ್ ದುರಂತಕ್ಕೆ ಕಾರಣಗಳಾದರು ಏನು

    Must read

    2020 ನ್ನು ಕೋವಿಡ್ ದುರಂತ ಸಂಭವಿಸಿದ ವರ್ಷವೆಂದು ನಾವು, ನಮ್ಮ ಮಕ್ಕಳು ಮತ್ತು ಮುಂದಿನ ತಲೆಮಾರಿನವರೆಲ್ಲ ಕರೆಯುವುದು ನಿರ್ಧರಿತ ವಿಚಾರ. ಆದರೆ, ಇಂತಹ ಘಟನೆ ಹಠಾತ್ತನೆ ಹೇಗೆ ಸಂಭವಿಸಿತು ಎನ್ನುವ ಪ್ರಶ್ನೆಗೆ ಉತ್ತರವೂ ಬೇಕಲ್ಲ?

    ಅದರ ಹುಡುಕಾಟ ಬಹಳ ಬೇಗನೆ ಶುರುವಾಯಿತು.ಈ ರೀತಿಯ ಪತ್ತೇದಾರಿಕೆ ಮಾಡುವಾಗ ಎಲ್ಲಿ ನಡೆಯಿತು? ಹೇಗೆ ನಡೆಯಿತು? ಎಂದು ತಿಳಿಯುವುದು ತುರ್ತು ಅಗತ್ಯವಾದರೂ ನಂತರ ಸಮಸ್ಯೆಯ ಬುಡವನ್ನು ತಲುಪುವುದು ಅತ್ಯಂತ ಮುಖ್ಯವಾಗುತ್ತದೆ. ಏತಕ್ಕೆ ನಡೆಯಿತು? ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕಬೇಕಾಗುತ್ತದೆ.

    ನಮಗೆಲ್ಲ ಮಾಧ್ಯಮಗಳ ಮೂಲಕ ತಿಳಿದ ವಿಚಾರಗಳೆಂದರೆ, ಕೋವಿಡ್ ಸೋಂಕು ಶುರುವಾದ್ದು ಚೈನಾದ ವೂಹಾನ್ ನಗರದ ಮಾಂಸದ ಮಾರುಕಟ್ಟೆಯಿಂದ ಎಂಬುದು. ಅದರಲ್ಲೂ ಇದು ವನ್ಯ ಮೃಗಗಳನ್ನು ಮಾರಲು ಅಧಿಕೃತವಾಗಿ ಪರವಾನಗಿ ಇರುವ ಮಾಂಸದ ಮಾರುಕಟ್ಟೆ. ಇಲ್ಲಿ ಮಾರುವ ಪ್ಯಾಂಗೋಲಿನ್ (ಚಿತ್ರ ನೋಡಿ) ಎನ್ನುವ ಪ್ರಾಣಿಯ ಮಾಂಸದ ಮೂಲಕ ಸೋಂಕು ಹರಡಿತು ಎನ್ನಲಾಗಿದೆ. ಅದರೆ ಆ ಪ್ರಾಣಿಯಲ್ಲಿ ಕೊರೋನ ವೈರಸ್ಸು ಹೊಕ್ಕಿದ್ದು ಹರಡಿದ್ದು ಬಾವುಲಿಯ ಕಡಿತದ ಮೂಲಕ.

    ಈ ಎರಡೂ ಪ್ರಾಣಿಗಳು ಮನುಷ್ಯನ ಬಗ್ಗೆ ಯಾವ ಲಕ್ಶ್ಯವನ್ನೂ ಕೊಡದೆ ತಮ್ಮ  ಪಾಡಿಗೆ ತಾವಿದ್ದರೂ ಮನುಷ್ಯನ ಅತಿಯಾಸೆ ಮತ್ತು ಏನನ್ನು ತಿಂದರೂ ಮುಗಿಯದ ಜಿಹ್ವಾ ಚಪಲದಿಂದ ಇಡೀ ಪ್ರಪಂಚವೇ ಇಂದು ನಲುಗಿಹೋಗಿದೆ. ಈ ಹಿಂದೆಯೂ ನಲುಗಿದೆ. ಮುಂದೆ ಭವಿಷ್ಯತ್ತಿನಲ್ಲಿ ಈ ಬಗೆಯ ಘಟನೆಗಳು ಬಹುಬಾರಿ ಮನುಷ್ಯರನ್ನು ನೋಯಿಸಬಲ್ಲವು ಎಂಬ ಗಂಭೀರ ಎಚ್ಚರಿಕೆಗಳಿವೆ

    ಪ್ಯಾಂಗೊಲಿನ್ ಮಾಂಸವನ್ನು ಕೇವಲ  ಚೈನೀಸ್ ಜನರು ಮಾತ್ರ ತಿನ್ನುತ್ತಾರೆಯೇ? ಖಂಡಿತ ಇಲ್ಲ. ಹಾಗಾಗಿ ಅವರನ್ನು ಮಾತ್ರ ಜರೆದರೆ ಈ ಬಗೆಯ ಅವಘಡಗಳು ನಿಲ್ಲುವುದೂ ಇಲ್ಲ. ಉದಾಹರಣೆಗೆ, ಇಂಡೋನೇಷಿಯಾದಲ್ಲಿ ಪೊಲೀಸರು ದಾಳಿ ನಡೆಸಿ ಸಾವಿರಾರು ಪ್ಯಾಂಗೋಲಿನ್ ಗಳನ್ನು ಶೀಥಲ ಕೋಣೆಯಲ್ಲಿ ಅನಧಿಕೃತವಾಗಿ ಇಟ್ಟದ್ದನ್ನು ಪತ್ತೆಹಚ್ಚಿದ್ದಾರೆ. ಆಫ್ರಿಕಾದಲ್ಲಿ ಅವಿರತವಾಗಿ ನಡೆದಿರುವ ಬುಶ್ ಮೀಟ್ ಮಾಂಸ ಕೂಡ ಇದೇ ಬಗೆಯ ಕಾೆಯಿಲೆ ಹಾಗೂ ಸೋಂಕನ್ನು ಹರಡಬಲ್ಲದು.

    ಗಮನಿಸಬೇಕಾದ ವಿಚಾರವೆಂದರೆ ಇದು ಏಷಿಯಾ ಮತ್ತು ಆಫ್ರಿಕಾ ಜನರು ತಿನ್ನುವ ಮಾಂಸ ಮಾತ್ರವಲ್ಲ. ಕಳ್ಳ ಸಾಗಾಣಿಕೆಯಲ್ಲಿ ಇದು ಯಾವ ದೇಶವನ್ನಾದರೂ ತಲುಪಬಲ್ಲದು. ಯಾರಿಂದ ಬೇಕಾದರೂ , ಯಾವ ದೇಶದಿಂದ ಬೇಕಾದರೂ ಹರಡಬಲ್ಲದು. ಹಾಗಾಗಿ ಇಂತಹ  ಇಡೀ ಸರಬರಾಜು ಸರಣಿಯನ್ನೇ ಪ್ರಶ್ನಿಸಬೇಕಾಗುತ್ತದೆ.ವನ್ಯ ಮೃಗಗಳನ್ನು ತಿನ್ನುವ ಪದ್ಧತಿಯನ್ನು ಕೈಬಿಡಲು ಕೈ ಜೋಡಿಸಬೇಕಾಗುತ್ತದೆ.ಸ್ವತಃ ನಾವೇ  ಮಾಂಸವನ್ನು ತಿನ್ನದಿದ್ದರೂ ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪಾತ್ರ ವಹಿಸಬೇಕಾಗುತ್ತದೆ.

    ಪ್ರಾಣಿಗಳಿಂದಲೇ ಬರುತ್ತವೆ

    ಕಾರಣವಿಷ್ಟೆ. ಧುತ್ತೆಂದು ಮನುಕುಲವನ್ನು ಕಾಡುವ ಕಾಯಿಲೆಗಳ ಮೂರು ಭಾಗದಲ್ಲಿ ಎರಡರಷ್ಟು ಪ್ರಾಣಿಗಳಿಂದಲೇ ಬರುತ್ತವೆ. ಅಮೆರಿಕಾದಲ್ಲಿ ಜೀವ ವೈವಿಧ್ಯತೆಯ ಪಿತಾಮಹ ಎಂದೇ ಹೆಸರುವಾಸಿಯಾದ ಥಾಮಸ್ ಲವ್ ಜಾಯ್ ಎಂಬ ವಿಜ್ಞಾನಿ ಇದ್ದಾನೆ. 79 ವರ್ಷದ ಈತ ಅಮೆಜಾನ್ ಅರಣ್ಯ ಜೀವ ವೈವಿಧ್ಯ ವಿಭಾಗದ ಅಧ್ಯಕ್ಷ, ಯುನೈಟೆಡ್ ನೇಷನ್ಸ್ ನ ಹಿರಿಯ ಸದಸ್ಯ, ಮತ್ತು ಜಾರ್ಜ್ ಮೇಸನ್ ವಿಶ್ವವಿದ್ಯಾನಿಲಯದ ಪ್ರಕೃತಿ ಮತ್ತು ಪಾಲಿಸಿಗಳ ವಿಭಾಗದ ಮುಖ್ಯಸ್ಥನೂ ಆಗಿ ತನ್ನ ಮಹತ್ವದ ಕೆಲಸವನ್ನು ಮುಂದುವರೆಸಿದ್ದಾನೆ. “ಜೀವ ವೈವಿಧ್ಯತೆ” ಎನ್ನುವ ಪದವನ್ನು ಕೂಡ ಈತನೇ ಬಳಕೆಗೆ ತಂದವನು.ಅದರ ಮಹತ್ವವನ್ನು ಕೂಡ ಜಗತ್ತಿಗೆ ತಿಳಿಸಿದವನು.ಈತ 1980 ರಲ್ಲೇ ವಿಜ್ಞಾನಿಗಳು ಪ್ರತಿವರ್ಷ 2 ರಿಂದ 4 ಹೊಸ ವೈರಸ್ಸುಗಳನ್ನು ಗುರುತಿಸುತ್ತಿರುವುದಾಗಿ ಹೇಳಿದ್ದ.ಇವೆಲ್ಲವೂ ಪ್ರಕೃತಿಯ ಮೇಲೆ ಮನುಷ್ಯರು ನಡೆಸುತ್ತಿರುವ ಅತಿಕ್ರಮಣ, ಅತ್ಯಾಚಾರದಿಂದಲೇ ನಡೆಯುತ್ತಿದೆ ಎಂದು ಹೇಳಿದ್ದ.ಇಂತಹ ಅತಿಕ್ರಮಣಗಳು ವಿಶ್ವವ್ಯಾಪೀ ಹೊಸವ್ಯಾಧಿಯನ್ನು ಉಂಟುಮಾಡಬಲ್ಲದು ಎಂದು ಮನುಷ್ಯರನ್ನು ಎಚ್ಚರಿಸಿದ್ದ.

    ಇದೀಗ ಆತನ ಭವಿಷ್ಯ ವಾಣಿ ನಿಜವಾಗಿದೆ. ಅದರ ಜೊತೆಯಲ್ಲೇ ಆತ ನೀಡಿದ ಕಾರಣಗಳ ಅವಲೋಕನ ಮತ್ತು ಭವಿಷ್ಯತ್ತಿನಲ್ಲಿ ಇವೇ ಪ್ರಮಾದಗಳನ್ನು ತಡೆಗಟ್ಟಲು ಸರಕಾರಗಳ ಪಾಲಿಸಿಗಳು, ಯೋಜನೆಗಳು ಮತ್ತು ಆತ್ಮಾವಲೋಕನ ತ್ವರಿತವಾಗಿ ಆಗಬೇಕೆಂದು ವಿಶ್ವ ಅರೋಗ್ಯ ಸಂಸ್ಥೆ ಕರೆನೀಡಿದೆ.

    ಇದೇ ವರ್ಷ ಏಪ್ರಿಲ್ 20 ರಂದು ಅಮೆರಿಕಾದ ತಜ್ಞ  ಲವ್ ಜಾಯ್ ಹೇಳುವ ಪ್ರಕಾರ ಅವುಗಳಲ್ಲಿ ಶೇಕಡಾ.71 ರಷ್ಟು ಕಾಯಿಲೆಗಳು ವನ್ಯಜೀವಿಗಳಿಂದ ಹರಡುತ್ತವೆ.ಈ ಹಿಂದೆ ಮನುಕುಲವನ್ನು ಕಾಡಿದ ಎಚ್. ಐ.ವಿ, ಏಡ್ಸ್, ಎಬೋಲ ಮತ್ತು ಸಾರ್ಸ್ ರೋಗಗಳು ಹರಡಿದ್ದು ಕೂಡ ಕಾಡು ಪ್ರಾಣಿಗಳ ಮೇಲೆ ಮನುಷ್ಯ ಮಾಡಿದ ಅತಿಕ್ರಮಣದಿಂದಲೇ ಶುರುವಾದ ಖಾಯಿಲೆಗಳು.

    ಪ್ರಕೃತಿಯ ಮೇಲೆ ಹಲವು ರೀತಿಯಲ್ಲಿ ಅತಿಕ್ರಮಣಗಳು ನಡೆಯುತ್ತಿವೆ.ಮನುಷ್ಯರು ಕಾಡನ್ನು ಕಡಿದು ನೆಲಸಮಗೊಳಿಸಿದ್ದಾರೆ. ಕಾಡು ಪ್ರಾಣಿಗಳು ಬದುಕಲು ಜಾಗವಿಲ್ಲದಂತೆ ಒತ್ತರಿಸಿದಂತೆಲ್ಲ ಅವುಗಳು ದಿಕ್ಕಿಲ್ಲದೆ ಮನುಷ್ಯರ ಜೊತೆ ಸಂಧಿಸಲೇ ಬೇಕಾಗುತ್ತದೆ. ಇಂತಹ ಎಲ್ಲ  ಸಂದರ್ಭಗಳಲ್ಲಿ ಆಯಾ ಪ್ರಾಣಿ ಸಂಕುಲಗಳನ್ನು  ವಿಲ್ಲನ್ ಗಳೆಂದು ಚಿತ್ರಿಸುವ ನಾವು ಮನುಷ್ಯರು ಮಾಡಿದ ತಪ್ಪುಗಳನ್ನು ಗಮನಿಸದವರಾಗಿದ್ದೇವೆ. ಬೇಕಂತಲೇ ಮರೆತುಬಿಡುತ್ತೇವೆ.

    ಆದರೆ 10 ಲಕ್ಷಕ್ಕೂ ಹೆಚ್ಚು  ಜನರು ಸತ್ತ ಬಳಿಕ, ಮೂರು ಕೋಟಿಗೂ ಹೆಚ್ಚು ಜನರು ಅಧಿಕೃತವಾಗಿ ಸೋಂಕಿತರೆಂದು ಘೋಷಿತರಾಗಿರುವಾಗ ಮನುಷ್ಯ ತನ್ನ ತಪ್ಪು ಏನೆಂದು ನೋಡಿಕೊಳ್ಳದೆ ವಿಧಿಯಿಲ್ಲದಾಗಿದೆ.

    ಇಡೀ ಪ್ರಪಂಚ ಮತ್ತೊಮ್ಮೆ “ಮನುಷ್ಯನ ಅವಿರತ ಪಾಪಗಳು ಅವನನ್ನು ಕಾಡದೇ ಬಿಡುವುದಿಲ್ಲ “- ಎಂಬ ತತ್ವವನ್ನು, ಪ್ರಕೃತಿಯ ಸಮತೋಲನದ ವಿಜ್ಞಾನವನ್ನು ಮತ್ತು ವಿವೇಕವನ್ನು ಮಾತನಾಡತೊಡಗಿವೆ. ಥಟ್ಟೆಂದು ಉರಿದುಬೀಳುತ್ತಿರುವ ಅರಣ್ಯಗಳು, ತೀಡಿ ಬೀಸುತ್ತಿರುವ ಚಂಡಮಾರುತಗಳು, ಧಗ ಧಗಿಸುತ್ತಿರುವ ಭೂ ಭಾಗಗಳು, ಸಾಗರದಲ್ಲಿ  ಏರುತ್ತಿರುವ  ಉಷ್ಣಾಂಶ, ಕರಗಿ ಹರಿಯುತ್ತಿರುವ ಮಂಜಿನ ಗಡ್ಡೆಗಳು, ಏರುತ್ತಿರುವ ಸಮುದ್ರ ಮಟ್ಟಗಳು ಆಕಾಶವೇ ಕಿತ್ತು ಬಿದ್ದಂತೆ ಬೀಳುವ ಮಳೆ ಎಲ್ಲವೂ ಮನುಷ್ಯರು ಪ್ರಕೃತಿಯ ಮೇಲೆ ಮಾಡುತ್ತಿರುವ ಆಕ್ರಮಣ ಮತ್ತು ಅತ್ಯಾಚಾರಗಳ ಕಾರಣವೇ ಎಂದು ಪ್ರಕೃತಿ ತಜ್ಞರು ಹೇಳಿದ್ದ ಮಾತುಗಳು ಕೊರೋನಾ ರೂಪದಲ್ಲಿ ತನ್ನ  ವಿರಾಟ್ ದರ್ಶನವನ್ನು ನೀಡಿದೆ ಎಂಬ ವಿಚಾರಕ್ಕೆ ಈಗ ಮತ್ತಷ್ಟು ಮೌಲ್ಯ ದೊರೆತಿದೆ. ಇವೆಲ್ಲ ಈ ಹಿಂದೆಯೂ ನಡೆಯುತ್ತಿದ್ದವಾದರೂ ಅವುಗಳ ಭೀಕರತೆ ಈಗಿನಂತಿರಲಿಲ್ಲ ಎನ್ನಲಾಗಿದೆ. ಅವಿರತ ಪ್ರಕೃತಿ ನಾಶ, ಅತಿಕ್ರಮಣ ಮತ್ತು ಪರಿಸರ ಮಾಲಿನ್ಯಈ ಮೂರು ವಿಚಾರಗಳು ಒತ್ತಟ್ಟಿಗೆ ಬಹುಕಾಲ ಸಂಭವಿಸಿದ ಪರಾಕಾಷ್ಠೆಯನ್ನು ತಲುಪಿರುವುದೇ ಈ ವಿಶ್ವವ್ಯಾಪೀ ಪಿಡುಗಿಗೆ ಕಾರಣ ಎಂದು ಹೇಳಲಾಗಿದೆ.

    ವೈರಸ್ಸಿನ ಹರಡುವಿಕೆಗೆ ಲಗಾಮು

    ಅತಿ ಸಣ್ಣದ್ದು ಎನ್ನಿಸುವ ಬದಲಾವಣೆಗಳು ಕೂಡ ವೈರಸ್ಸಿನ ಹರಡುವಿಕೆಗೆ ಲಗಾಮು ಹಾಕಲು ಕಾರಣವಾಗಬಲ್ಲವು. ಉದಾಹರಣೆಗೆ  ಫಾರಂ ಗಳಲ್ಲಿ ಬೆಳೆದ ಪ್ರಾಣಿಗಳ ಮಾರುಕಟ್ಟೆ ಮತ್ತು ಕಾಡುಗಳಿಂದ ಹಿಡಿದು ತಂದ ಪ್ರಾಣಿಗಳ ಮಾರುಕಟ್ಟೆಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು, ಅವುಗಳ ಆಮದು ಮತ್ತು ರಫ್ತುಗಳನ್ನು ನಿಯಂತ್ರಿಸುವುದು, ಕಳ್ಳ ಸಾಗಾಣಿಕೆಯ ಮೇಲೆ ಕಡಿವಾಣ ಹಾಕುವುದು ಇತ್ಯಾದಿಗಳಿಂದ ವೈರಸ್ಸುಗಳು ಒಂದು ಪ್ರಭೇದದಿಂದ ಇತರೆ ಪ್ರಭೇದಗಳಿಗೆ ಹರಡುವುದನ್ನು ಬಹುಮಟ್ಟಿಗೆ ತಡೆಯಬಹುದು.

    ಆದರೆ ಸಧ್ಯಕ್ಕೆ ಮನುಷ್ಯನ ದಾರ್ಷ್ಟ್ಯ ಇವೆಲ್ಲ ಕ್ರಮಗಳನ್ನು ಅವನು ಕಡೆಗಣಿಸುವಂತೆ ಮಾಡಿದ್ದರಿಂದಲೇ ಇಂತಹ ದೊಡ್ಡ ಅವಘಡ ಸಂಭವಿಸಿದ್ದು.

    ಯು.ಎನ್. ನ ಪರಿಸರ ತಜ್ಞರ ಮುಖ್ಯಸ್ಥ ಇಂಗರ್ ಆಂಡರ್ಸನ್ ಕೊರೊನ ಸೋಂಕು ಪ್ರಕೃತಿಯೇ ಮಾನವನಿಗೆ ಕಳಿಸಿರುವ ಎಚ್ಚರಿಕೆಯ ಉಡುಗೊರೆ ಎಂದಿದ್ದಾನೆ. ಪ್ರಕೃತಿಯ ನಾಶದೊಂದಿಗೇ ಮನುಷ್ಯನ ನಾಶವೂ ಖಚಿತ ಎಂದು ಹೇಳುತ್ತಾನೆ. ಇವನ ಪ್ರಕಾರ ಪ್ರಕೃತಿಯ ಬತ್ತಳಿಕೆಯಲ್ಲಿ  ಕೊರೊನಕ್ಕಿಂತಲೂ ಅತ್ಯಂತ ಮಾರಣಾಂತಿಕವಾದ ಹತ್ತಾರು ಅಸ್ತ್ರಗಳಿವೆ.

    ಪ್ರಕೃತಿ ಅವುಗಳನ್ನು ನಮ್ಮಿಂದ ದೂರವಿಟ್ಟಿದ್ದರೂ ಪ್ರತಿಬಾರಿ ಮನುಷ್ಯನೇ ಆ ಅಂತರವನ್ನು ಅತಿಕ್ರಮಿಸಿ ಆಪತ್ತುಗಳನ್ನು ಆಮಂತ್ರಿಸಿಕೊಳ್ಳುತ್ತಿದ್ದಾನೆ. ಕೋವಿಡ್ ಕಾಯಿಲೆ ಕೇವಲ ಒಂದು ಎಚ್ಚರಿಕೆಯಷ್ಟೇ ಎಂದು ವಿವೇಕ ಹೇಳಿದ್ದಾನೆ.

    ಇಂತಹ ಕಾಯಿಲೆಗಳಿಂದ ದೂರವಿರಲು ತತ್ ಕ್ಷಣದಿಂದಲೇ ಗ್ಲೋಬಲ್ ಹೀಟಿಂಗ್, ವ್ಯವಸಾಯಕ್ಕಾಗಿ ಅರಣ್ಯ ನಾಶ, ಗಣಿಗಾರಿಕೆ ಮತ್ತು ಕಾಡು ಕಡಿದು ವಸತಿ ವಿಸ್ತರಣೆ , ವನ್ಯ ಪ್ರಾಣಿಗಳ ಭಕ್ಷಣೆ, ಮಾರಾಟ, ಆಮದು-ರಫ್ತು ಇವುಗಳನ್ನು ನಿಲ್ಲಿಸಬೇಕಿದೆ ಎನ್ನುತ್ತಾನೆ.ಇಲ್ಲದಿದ್ದರೆ ಮತ್ತೆ ಮತ್ತೆ ಇಂತಹ ವಿಶ್ವ ವ್ಯಾಪೀ ಪಿಡುಗುಗಳು ಮನುಷ್ಯನನ್ನೂ ಗೋಳಾಡಿಸಬಲ್ಲವು.

    ಇತ್ತೀಚೆಗಿನ ಆಷ್ಟ್ರೇಲಿಯದ ಕಾಳ್ಗಿಚ್ಚು ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಿತು. 70 ವರ್ಷಗಳಲ್ಲಿ ನಡೆದಿರದಂತ ಆಫ್ರಿಕಾದ ಲೋಕಸ್ಟ್ ಗಳ ದಾಳಿ, ಬೋರ್ನಿಯೋದ ಅರಣ್ಯ ನಾಶ ಇಂತಹ ಪ್ರತಿ ಘಟನೆಗಳೂ ಪ್ರಕೃತಿ ಪ್ರಿಯ ಜನರನ್ನು ಉತ್ತರಗಳನ್ನು ಹುಡುಕುವಂತೆ ಬಲವಂತ ಮಾಡಿತು.ಇತ್ತೀಚೆಗಿನ ವರ್ಷಗಳಲ್ಲಿ ಕಂಡ ಎಬೋಲ, ಬರ್ಡ್ ಫ್ಲೂ, ಮೆರ್ಸ್, ರಿಫ್ಟ್ ವ್ಯಾಲಿ ಜ್ವರ, ಸಾರ್ಸ್, ಜೀಕ ವೈರಸ್, ಪಶ್ಚಿಮ ನೈಲ್ ವೈರಸ್ ಎಲ್ಲವೂ ವನ್ಯ ಪ್ರಾಣಿಗಳಿಂದ ಮನುಷ್ಯನಿಗೆ ಹರಡಿದಂತ ಕಾಯಿಲೆಗಳು.ಹಾಗಾಗಿ  ಕೊರೊನಾ ವೈರಸ್ ನಂತವು ಬರಬಹುದಾದ ಸಾಧ್ಯತೆ ಹತ್ತಿರದಲ್ಲೇ ಕಾಯುತ್ತಿತ್ತು. ಕೊನೆಗೂ ವನ್ಯ ಪ್ರಾಣಿ ಭಕ್ಷಣೆಯ ಮೂಲಕ ಬಂದೇ ಬಂದಿತು.ಆದರೆ ಅದೃಷ್ಟವಶಾತ್ ಕೋವಿಡ್ ಸೋಂಕಿನಲ್ಲಿ ಮರಣದ ಸಂಖ್ಯೆ ಕಡಿಮೆಯಿದೆ.

    ಎಬೋಲಾ ವಿಶ್ವ ವ್ಯಾಪಿಯಾಗಿದ್ದರೆ ಮರಣದ ವೇಗ ಶೇಕಡ 50, ನಿಪಾ ವೈರಸ್ ನಲ್ಲಿ ಶೇಕಡ 60-75 ಇರುತ್ತಿತ್ತು. ಹಾಗಾಗಿ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮನುಷ್ಯ ಪ್ರಭೇದ ಅತ್ಯಂತ ವೇಗವಾಗಿ ನಿರ್ನಾಮವಾಗುತ್ತದೆ ಎನ್ನುತ್ತಾನಿವನು.

    ಸಧ್ಯಕ್ಕೆ ಪರಸರ ಕುರಿತ ಕಾಯಿದೆಗಳು ಮತ್ತು ಆರೋಗ್ಯ ಕುರಿತಾದ ಕಾಯಿದೆಗಳು ಬೇರೆ, ಬೇರೆಯಾಗಿವೆ.ಆದರೆ ಪರಿಸರ ಮತ್ತು ಮನುಷ್ಯ ಬೇರೆ ಬೇರೆಯಲ್ಲ.ಅವೆರಡನ್ನೂ ಒಟ್ಟಾಗಿ ನೋಡಬೇಕು ಎನ್ನುವ ಬೇಡಿಕೆಗಳಿವೆ.ಜನವರಿ ತಿಂಗಳಲ್ಲಿ ಇಡೀ ವೂಹಾನ್ ಪ್ರಾಣಿ ಮಾರುಕಟ್ಟೆಯನ್ನು ಮುಚ್ಚಲಾಯಿತು.ಇದೀಗ ಅದನ್ನು ಶಾಶ್ವತವಾಗಿ ಮುಚ್ಚಿ ಎನ್ನುವ ಅಹವಾಲುಗಳಿವೆ.

    ಈ ಹಿಂದೆ ಅಂತಾರಾಷ್ಟ್ರೀಯ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸರುವ ಜಾನ್ ಸ್ಕಾನ್ಲ್ಯಾನ್ ವನ್ಯ ಮೃಗಗಳ ಮಾರಾಟದ ಅನಧಿಕೃತ ಮಾರುಕಟ್ಟೆಯ ಮೊತ್ತ ವರ್ಷವೊಂದಕ್ಕೆ ಸುಮಾರು 1 ಬಿಲಿಯನ್ ಡಾಲರ್ ಗಳಷ್ಟು ದೊಡ್ಡದು ಎನ್ನುತ್ತಾನೆ.ಈ ಕಾಲದಲ್ಲಿ ಒಬ್ಬ ಮನುಷ್ಯ ಇಂದು ಮಧ್ಯ ಆಪ್ರಿಕಾದಲ್ಲಿದ್ದರೆ ನಾಳೆ ಲಂಡನ್ ನಗರದಲ್ಲಿರಬಹುದು,ಆದ್ದರಿಂದ ಕಾಯಿಲೆಗಳು ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ತಕ್ಷಣ ಹರಡಬಲ್ಲದು ಇದನ್ನು ಹತ್ತಿಕ್ಕುವುದು ಅಸಾಧ್ಯ ಆದ್ದರಿಂದ ಯಾವುದೇ ಕಾನೂನು ಬಂದರೂ ಅದು ಅಂತಾರಾಷ್ಟ್ರೀಯ ಮಟ್ಟದ ಕಾನೂನಾದರೆ ಮಾತ್ರ ಕೆಲಸ ಮಾಡಬಲ್ಲದು ಎಂದು ಈತ ಹೇಳುತ್ತಾನೆ.

    ಉದಾಹರಣೆಗೆ ಆಮದು ಮಾಡಿಕೊಳ್ಳುವ ದೇಶಗಳು ಯಾವುದೇ ಮಾಂಸ ಮಡ್ಡಿಗಳು ಅವುಗಳನ್ನು ರಫ್ತುಮಾಡುವ ದೇಶದ ಕಾನೂನುಗಳ ಪ್ರಕಾರ ಅದನ್ನು ಪಡೆಯಲಾಗಿದೆ ಎನ್ನುವ ರುಜವಾತಿಲ್ಲದೆ ಖರೀದಿ ಮಾಡಬಾರದು. ಇದನ್ನು ಅಪರಾಧಿ ವಿಭಾಗದವರು  ಜೊತೆ ಜೊತೆಯಲ್ಲೇ ಕಾನೂನು ಬದ್ದವಾಗಿ ಅನುಮೋದಿಸಬೇಕು, ಆಗ ಸರಿಯಾದ ಕ್ರಮದಲ್ಲಿ ಪ್ರಾಣಿಗಳ ಸಾಕಾಣಿಕೆ ಮಾಡಿ ಮಾರುವವರು ಕಳ್ಳ ದಂಧೆಯವರಿಗೆ ತಮ್ಮ ಮಾರುಕಟ್ಟೆಯ ಕಳೆದುಕೊಳ್ಳುವುದಿಲ್ಲ. ಜೊತೆಯಲ್ಲೇ ಜೀವ ವೈವಿಧ್ಯತೆ, ಅವುಗಳು ಬದುಕುವ ಪರಿಸರದ ಸಮತೋಲನ ಉಳಿಯುತ್ತದೆ ಮತ್ತು ಪ್ರಭೇದಗಳ ನಾಶವನ್ನು ತಡೆಯಬಹುದಾಗಿದೆ.

    ನಶಿಸಿದ ಪ್ರಾಣಿ ಸಂಕುಲ

    ವನ್ಯಜೀವಿಗಳ ಧರ್ಮಾರ್ಥ ಸಂಸ್ಥೆ WWF ಪ್ರಕಾರ ಸಸ್ತನಿಗಳು, ಪಕ್ಷಿ, ಮೀನು, ಉಭಯಜೀವಿಗಳು ಮತ್ತು ಸರೀಸೃಪಗಳ ಸಂಖ್ಯೆ 1970 ರನಂತರ ಅಚ್ಚರಿಗೊಳಿಸಬಲ್ಲ ಅಸಾಧಾರಣ ಸರಾಸರಿ ಶೇಕಡ 68 ನಶಿಸಿಹೋಗಿವೆ. ಅಂದರೆ ಕೇವಲ 50 ವರ್ಷಗಳಲ್ಲಿ ಎರಡನೇ ಮೂರು ಭಾಗದಷ್ಟು ಜೀವಿಗಳು ಈ ಭೂಗೋಲದಿಂದ ನಿರ್ಗಮಿಸಿಬಿಟ್ಟಿವೆ. ಇದರ ಜೊತೆಯೇ ಕಂಡು ಕೇಳರಿಯದ ರೀತಿಯಲ್ಲಿ ಅವುಗಳ ವಾಸಸ್ಥಾನಗಳೂ ನಾಶವಾಗುತ್ತಿವೆ.ಇಂತಹ ಕೃತ್ಯಗಳು ನಿಲ್ಲುವ ಸೂಚನೆಗಳನ್ನೇ ತೋರಿಸದಿರುವಾಗ ಕೊರೊನಾ ಸೋಂಕಿನಂತಹವು ಮನುಕುಲವನ್ನು ಅಪ್ಪಳಿಸಿರುವುದು ಅತ್ಯಂತ ಸಹಜ ಎಂಬ ಹೇಳಿಕೆಗಳಿವೆ.

    ಒಂದೇ ಪ್ರಭೇದವನ್ನು ಅವಿರತ ಬೇಟೆಯಾಡುವ ಕಳ್ಳ ದಂಧೆಗಳಿಗೆ ಪೂರ್ಣ ವಿರಾಮ ಬೀಳದಿದ್ದರೆ ಉದಾಹರಣೆಗೆ, ಘೇಂಡಾಮೃಗಗಳು, ಆನೆ ಅಥವಾ ಸಿಂಹಗಳಂತ ದೊಡ್ಡ ಪ್ರಾಣಿಗಳು,  ಸಣ್ಣ ಪ್ರಾಣಿಗಳು, ಪಕ್ಷಿಗಳು, ಕೆಲವು ಬಗೆಯ ಮೀನುಗಳು ಅತ್ಯಂತ ಬೇಗನೆ ದಂತಕಥೆಗಳಾಗಿ ಬಿಡಬಲ್ಲವು.ಇದು ನೇರವಾಗಿ ನಡೆದರೆ ಪರೋಕ್ಷವಾಗಿ ಅವುಗಳನ್ನೇ ನಂಬಿ ಬದುಕುವ ಇತರೆ ಪ್ರಾಣಿ ಮತ್ತು ಕೀಟಗಳೂ ಸಾಯುತ್ತವೆ.

    ಉಗಾಂಡದಲ್ಲಿ ಇದಕ್ಕೆ ತದ್ವಿರುದ್ಧವಾದದ್ದು ಕೂಡ ನಡೆಯಿತು. ಅಲ್ಲಿನ ಕಾಡಿನಲ್ಲಿದ್ದ ಸಣ್ಣ ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದವರು ಅತ್ಯಂತ ವಿರಳವಾಗಿ ಕಂಡುಬರುವ  ಬೆಳ್ಳಿ ಬೆನ್ನಿನ ಬೆಟ್ಟದ ಗೊರಿಲ್ಲ ವೊಂದನ್ನು ಕೊಂದರು.

    ಬೋಸ್ವಾನದಲ್ಲಿ ಸರಕಾರವೇ ಆನೆಗಳನ್ನ ಬೇಟೆಯಾಡಲು ಪರವಾನಗಿ ನೀಡುತ್ತದೆ. ಇದರ ಜೊತೆಯಲ್ಲಿ ಇದೇ ವರ್ಷದ ಏಪ್ರಿಲ್,ಮೇ, ಜೂನ್ ನಲ್ಲಿ ನೂರಾರು ಆನೆಗಳು ಅತ್ಯಂತ ರಹಸ್ಯಮಯವಾಗಿ ಸತ್ತು ಬಿದ್ದವು.

    21 ನೇ ತಾರೀಕಿನ ವೇಳೆಗೆ ಅವುಗಳು ಕುಡಿಯುತ್ತಿದ್ದ ನೀರಿನಲ್ಲಿದ್ದ ಒಂದು ರೀತಿಯ ಬ್ಯಾಕ್ಟೀರಿಯಾಗಳು ಅವುಗಳ ಸಾವಿಗೆ ಕಾರಣವೆಂದು ಹೇಳಲಾಯಿತು.

    ನಮ್ಮಂತೆ ಅವುಗಳಿಗೂ ತಮ್ಮದೇ ಆದ ಕಾಯಿಲೆ ಇತ್ಯಾದಿಗಳು ಕಾಡುತ್ತವೆ. ಕಾಡು ಪ್ರಾಣಿಗಳು ಒಂದನ್ನೊಂದು ಬೇಟೆಯಾಡುತ್ತವೆ. ಜೊತೆಗೆ ಮನುಷ್ಯನ ಅಧಿಕೃತ ಬೇಟೆ, ಅನಧಿಕೃತ ಭೇಟೆಗಳಿಗೆ ಅವು ತುತ್ತಾಗುತ್ತವೆ.ಅವುಗಳು ಬದುಕುವ ಪರಿಸರಗಳು ಅಪಾಯಕಾರಿಯಾಗಿ ಬದಲಾಗುತ್ತಿವೆ. ಇದು ಮಾತ್ರ ಸಾಲದು ಎಂದು ಮಾನವ ಅವುಗಳ ವಾಸಿಸುತ್ತಿರುವ ಪರಿಸರವನ್ನು ವ್ಯವಸಾಯ, ಕೈಗಾರಿಕೆ, ಗಣಿಗಾರಿಕೆ, ಮರ ಸಾಗಾಣಿಕೆ, ಮನೆ ಕಟ್ಟುವಿಕೆ ಇತ್ಯಾದಿಗಳಿಗಾಗಿ ನಾಶಮಾಡುತ್ತಲೇ ಹೋಗುತ್ತಿದ್ದಾನೆ.

    ಇದನ್ನೆಲ್ಲ ಸಹಿಸಿಕೊಂಡು ಉಳಿಯುವ ಶಕ್ತಿ ಮೂಕ ಪ್ರಾಣಿಗಳಿಗೆ ಖಂಡಿತಾ ಇಲ್ಲ. ಈ ಕಾರಣ ಜೀವ ವೈವಿಧ್ಯತೆ ಇಲ್ಲವಾಗುತ್ತದೆ. ಇದರ ಜೊತೆ  ಅಪಾಯಕಾರಿ ಪ್ರಭೇದಗಳು, ವೈರಸ್ಸುಗಳು, ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ. ಪ್ರಕೃತಿ ವಿಕೋಪಗಳು ಹೆಚ್ಚುತ್ತವೆ. ಮನುಷ್ಯರು ನಿಧಾನವಾಗಿ ಆದರೆ ಖಚಿತವಾಗಿ ತಮ್ಮ ನಾಶಕ್ಕೂ ಕಾರಣರಾಗಿದ್ದಾರೆ.

    ಕಾಡು ಕಡಿದು ಮಾಡುವ ಯಾವುದೇ ಪ್ರಾಜೆಕ್ಟುಗಳನ್ನು  ಆಯಾ ದೇಶಗಳು ಅನೂರ್ಜಿತಗೊಳಿಸಬೇಕಿದೆ. ಇವೇ ವಿಚಾರಗಳು ಸಮುದ್ರ ಮತ್ತು ಜಲಚರಗಳ ಶೋಷಣೆಯ ವಿಚಾರಕ್ಕೂ ಜಾರಿಯಾಗಲಿ ಎನ್ನುವ ಆಶಯಗಳಿವೆ. ಈಗಾಗಲೇ ಗ್ಲೋಬಲ್ ವಾರ್ಮಿಂಗ್ , ಕಾರ್ಬನ್ ಎಮಿಶನ್ ಮತ್ತು ಪರಿಸರ ಮಾಲಿನ್ಯಗಳ ಆಂದೋಲನ ಶುರುವಾಗಿ ದಶಕಗಳೇ ಕಳೆದರೂ ತತ್ ಕ್ಷಣದ ಲಾಭಗಳಿಗಾಗಿ ಹೆಚ್ಚಿನ ಬದಲಾವಣೆಗಳನ್ನು ಜಾರಿಗೆ ತಂದಿಲ್ಲ. ಈ ವಿಚಾರದಲ್ಲಿ ಇನ್ನೂ ಕಾಯಲು ಸಮಯ ಉಳಿದಿಲ್ಲ ಎನ್ನುವ ಅರಿವು ಈಗ ನಿಚ್ಚಳವಾಗುತ್ತದೆ.

    ಗಮನಿಸಿ ಕೋವಿಡ್ ನಂತಹ ವೈರಸ್ಸುಗಳನ್ನು ದೇಶದಿಂದ ದೇಶಕ್ಕೆ ಹರಡಿದ್ದು ಕೂಡ ಮನುಷ್ಯರೇ ಹೊರತು ವೈರಸ್ಸುಗಳು ತಾವಾಗಿ ಹೋಗಲಿಲ್ಲ.ಪರಸ್ಪರರಿಗೆ ನೀಡುತ್ತಿರುವವರೂ ಮನುಷ್ಯರೇ.

    ಮಾನವನಿಂದಲೇ ವಿನಾಶ

    ಮನುಷ್ಯ ಮಾಡುತ್ತಿರುವ ಪ್ರಕೃತಿ ವಿನಾಶದ ವಿಷಮತೆ ಅದಷ್ಟು ಗಂಭೀರವಾಗಿದೆಯೆನ್ನಲು ನಾವು ಕೆಳಗಿನ ಕೆಲವು ಅಂಕಿ-ಅಂಶಗಳನ್ನು ನೋಡಬಹುದು.

    1)  ಲ್ಯಾಟಿನ್ ಅಮೆರಿಕಾ ಮತ್ತು ಕ್ಯಾರೆಬ್ಬಿಯನ್ ದೇಶದಲ್ಲಿನ ವನ್ಯಜೀವಿಗಳ ಪ್ರಮಾಣಗಳು ಶೇಕಡ 94 ಕಡಿಮೆಯಾಗಿದೆ. ಇದು ದಾಖಲೆ ಪ್ರಮಾಣದ ಜೀವ ಜಾಲ ನಾಶ.

    2) ಸಿಹಿನೀರಿನ ಜೀವ ಜಾಲ ಜಗತ್ತುಶೇಕಡ 84 ಅಳಿದಿದೆ. ಚೈನಾದ ಯಾಂಗ್ಸೆ ನದಿಯ 27 ವಿಧದ ಮೀನುಗಳ ಪ್ರಮಾಣ ಶೇ.97% ಇಳಿದಿವೆ.

    3) ಪ್ರಪಂಚದ ವಿವಿದೆಡೆ ಅಳಿವಿನ ಅಂಚಿನಲ್ಲಿರುವ ಲೆದರ್ ಬ್ಯಾಕ್ ಆಮೆಗಳು ಶೇ.20 ರಿಂದ 98 ನಾಶವಾಗಿವೆ.ಕೋಸ್ಟಾರಿಕಾದ ಟಾರ್ಟುಗೆರ ಬೀಚ್ ಒಂದರಲ್ಲೇ ಇವುಗಳ ಸಂತತಿ ಶೇ.84  ಇಳಿಕೆ ಕಂಡಿದೆ

    4) ಮಧ್ಯ ಆಫ್ರಿಕಾದ ಆನೆಗಳ ಸಂಖ್ಯೆಶೇಕಡ 98 ಇಳಿಕೆ ಕಂಡಿದೆ.

    5) ಇಂಗ್ಲೆಂಡಿನ ಬೂದು ಪಾರ್ಟಿಡ್ಜ್ ಪಕ್ಷಿಗಳ ಸಂಖ್ಯೆಶೇಕಡ 85 ಇಳಿಕೆ ಕಂಡಿದೆ.ಇಲ್ಲಿಯ ಆರ್ಕ್ನಿ ಎನ್ನುವ ದ್ವೀಪದ ಮತ್ತೊಂದು ಪಕ್ಷಿ ಆರ್ಕಿಟ್ಕ್ ಸ್ಕುವಾಗಳ ಸಂಖ್ಯೆಶೇಕಡ 62 ಕುಸಿದಿದೆ.

    6) ಹಿಮದಿಂದ ಆವೃತವಾಗಿಲ್ಲದ ಶೇಕಡ 75 ಭಾಗ ಭೂಮಿಯನ್ನು ಮನುಷ್ಯ ತನ್ನ ಚಟುವಟಿಕೆಯಿಂದ ಬದಲಾಯಿಸಿದ್ದಾನೆ.

    ಹೊಸ ಕಾನೂನಿನ ಕಾರಣದಿಂದಾಗಿ ಘಾನದ ಆನೆಗಳು, ಆಸ್ಟ್ರೇಲಿಯಾದ ಕಪ್ಪು ಬಾಲದ ಶಾರ್ಕ್ ಗಳು, ನೇಪಾಳದ ಹುಲಿಗಳು ಸಂರಕ್ಷಣಾ ಮತ್ತೆ ತಮ್ಮ ಸಂತಾನವನ್ನು ವೃದ್ಧಿಸಿಕೊಂಡ ನಿದರ್ಶನಗಳಿವೆ. ಹಾಗಾಗಿ ಪ್ರಕೃತಿಯನ್ನು ಕಾನೂನುಗಳ ಮೂಲಕ ಮತ್ತು ಅಪರಾಧಿಗಳನ್ನು ಶಿಕ್ಷಿಸುವ ಮೂಲಕ ಕಾಯುವುದು ಸಾಧ್ಯವಿದೆ.

    ಬರಿಯ ರಾಷ್ಟ್ರೀಯ ಕಾಯಿದೆಗಳ ಬದಲು ಇದಕ್ಕಾಗಿ ಅಂತಾರಾಷ್ಟ್ರೀಯ ಕಾಯಿದೆಗಳ ಅಗತ್ಯವಿದೆ. ಕೋವಿಡ್-19 ಎನ್ನುವ ಒಂದೇ ಒಂದು ವೈರಸ್ಸು ಪ್ರಪಂಚವನ್ನೆಲ್ಲ ನಲುಗಿಸಿ ಮನುಷ್ಯರನ್ನು ಎಚ್ಚರಿಸಿರುವ ಕಾಲದಲ್ಲಿ ಪರಿಸರ ತಜ್ಞರು ಕೇಳಿರುವಮಹತ್ತರ  ಬದಲಾವಣೆಗಳನ್ನು ತರುವುದುಅತ್ಯಂತ ಸೂಕ್ತವಾದ ನಿರ್ಧಾರವಾಗುತ್ತದೆ.

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    12 COMMENTS

    1. ಅದ್ಭುತ ಲೇಖನ. Very informative. ಈಗಲೂ ನಾವು ಎಚ್ಚೆತ್ತು ಕೊಂಡಿಲ್ಲ ಎಂದರೆ ಮುಂದಿನ ಪೀಳಿಗೆ ನಮ್ಮನ್ನು ಖಂಡಿತ ಕ್ಷಮಿಸುವುದಿಲ್ಲ.

    2. ಮಾಡಿದ್ದೂ ಉಣ್ಣೋ ಮಹರಾಯ ಎಂಬಂತೆ. ಮನುಜ ಕುಲ ಪ್ರಕೃತಿ ಯ ಮೇಲೆ ಯಸಗಿದ ಅತ್ಯಾಚಾರವೇ ಅವನ ವಂಶ ವನ್ನು ನಾಶ ಗೊಳಿಸುತ್ತಿದೆ ಎಂಬ ನಗ್ನ ಸತ್ಯವನ್ನು ಎಳೆ ಎಳೆ ಯಾಗಿ ಬರಹ ರೂಪದಲ್ಲಿ ಬಿಡಿಸಿದ ಲೇಖಕಿ Dr. ಪ್ರೇಮಲತಾ B. ಯವರಿಗೆ ವಂದನೆಗಳು 🙏🙏ಈ ನೆವದಿಂದಾದರೂ ಮನುಜ ಸಸ್ಯಾಹಾರಿ ಆದರೆ ಒಳಿತು ಎಂಬ ಸದಾಶಯ.
      ವಂದನೆಗಳು -ಸಿ. ಕೆ. ಆನಂದತೀರ್ಥಾಚಾರ್

    3. ಸಾಕ್ಷ್ಯಾಧಾರ ಸಹಿತ ಮಾಹಿತಿಪೂರ್ಣ ಲೇಖನಕ್ಕಾಗಿ ಅಭಿನಂದನೆ ಗೆಳತಿ..

    4. ಎಲ್ಲೆಲ್ಲಿಂದ ಮಾಹಿತಿಗಳನ್ನು ಕಲೆಹಾಕಿ ಮನುಕುಲವನ್ನು ಎಚ್ಚರಿಸಿದ್ದೀರಿ. ನಿಮ್ಮ ಶ್ರದ್ಧೆ, ನಿಮ್ಮ ಶಿಸ್ತು ಮತ್ತು ಕನ್ನಡ ಭಾಷೆಯ ಮೇಲಿನ ಪ್ರಭುತ್ವಕ್ಕೆ ನಮಸ್ಕರಗಳು. _ ಕೇಶವ

      • ಧನ್ಯವಾದಗಳು ಕೇಶವ್ ಅವರೆ. ನಿಮ್ಮ ನಿರಂತರ ಬೆನ್ನು ತಟ್ಟುವಿಕೆ ಸ್ಪೂರ್ತಿಯಾಗಿ ಕೆಲಸಮಾಡುತ್ತಿದೆ ಎಂದುಕೊಂಡಿದ್ದೇನೆ.

        • ಕೋವಿಡ್ ಬಗ್ಗೆ ಆರಂಭದಿಂದಲೂ ಕನ್ನಡ ಓದುಗರಿಗೆ ಅಧ್ಯಯನ ಪೂರ್ಣ ಲೇಖನಗಳನ್ನು ಬರೆಯುತ್ತಿರುವ ಪ್ರೇಮಲತ ಅವರಿಗೆ ಧನ್ಯವಾದ. ಇಂಥ ಮಾಹಿತಿ ಕನ್ನಡಪ್ರೆಸ್.ಕಾಮ್ ಮೂಲಕ ಲಭ್ಯವಾಗುತ್ತಿದೆ ಎಂಬುದೆ ನಮಗೊಂದು ವಿಶೇಷ ಸಂಗತಿ. -ಸಂಪಾದಕ

    LEAVE A REPLY

    Please enter your comment!
    Please enter your name here

    Latest article

    error: Content is protected !!