28 C
Karnataka
Sunday, May 19, 2024

    ಸೋಂಕು ನಿಯಂತ್ರಣಕ್ಕೆ ಅನಿವಾರ್ಯವಾಗುತ್ತಾ ಮತ್ತೊಂದು ಲಾಕ್‌ಡೌನ್

    Must read

    ಅಶೋಕ ಹೆಗಡೆ
    ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಗೆ ಬರಲಿದೆಯೇ? ಹಾಗೊಂದು ಆತಂಕ ಜನರಲ್ಲಿ ಶುರುವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಕೋವಿಡ್-19 ಸೋಂಕು ಇಂತಹದೊಂದು ಕಳವಳವನ್ನು ಹುಟ್ಟುಹಾಕಿದೆ.

    ದೇಶದಲ್ಲಿ ಮೊದಲ ಕೊರೊನಾ ಸಾವು ಸಂಭವಿಸಿದ್ದೇ ಕರ್ನಾಟಕದಲ್ಲಿ. ಮಾರ್ಚ್ ೧೨ರಂದು ಕಲಬುರಗಿಯ ವೃದ್ಧರೊಬ್ಬರು ಮೃತಪಟ್ಟರು. ತಬ್ಲಿಘಿ ಸಮಾವೇಶದಿಂದ ದೇಶಾದ್ಯಂತ ಸೋಂಕು ವೇಗವಾಗಿ ಹರಡಲು ಆರಂಭವಾಗಿದೆ ಎನ್ನುವುದನ್ನು ದೇಶಕ್ಕೆ ತೋರಿಸಿಕೊಟ್ಟಿದ್ದು ಕೂಡ ಅದೇ ವ್ಯಕ್ತಿಯ ಸಾವು. ಆ ಬಳಿಕ ಎಚ್ಚೆತ್ತ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತು. ಹೀಗಾಗಿ ಶುರುವಿನಲ್ಲಿ ರಾಜ್ಯದಲ್ಲಿ ಸೋಂಕು ಪ್ರಸರಣ ತಕ್ಕಮಟ್ಟಿಗೆ ನಿಯಂತ್ರಣದಲ್ಲಿತ್ತು. 4ಟಿ ಸೂತ್ರ (ಟ್ರೇಸ್, ಟೆಸ್ಟ್, ಟ್ರ್ಯಾಕ್ ಅಂಡ್ ಟ್ರೀಟ್‌ಮೆಂಟ್) ಅನುಸರಿಸಿದ ಪರಿಣಾಮವಾಗಿ ರಾಜ್ಯದ ಕ್ರಮ ಕೇಂದ್ರ ಸರಕಾರದ ಮೆಚ್ಚುಗೆಗೂ ಪಾತ್ರವಾಯಿತು.

    ಲಾಕ್‌ಡೌನ್ ತೆರವಾದ ಬಳಿಕ ಚಿತ್ರಣ ಸಂಪೂರ್ಣ ಬದಲಾಗಿದೆ. ಸೋಂಕಿತರ ಸಂಖ್ಯೆ ನಿತ್ಯ ನೂರರ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಂತೂ ಮೂಲೆಮೂಲೆಗಳಿಗೂ ಸೋಂಕು ವ್ಯಾಪಿಸುತ್ತಿದೆ. ಪೊಲೀಸರಿಂದ ವೈದ್ಯರವರೆಗೆ, ಆಟೋ ಚಾಲಕರಿಂದ ಸಚಿವರವರೆಗೆ ಎಲ್ಲರಿಗೂ ಸೋಂಕು ತಾಗಿದೆ.

    ಮಾಹಿತಿ :Karnataka Covid 19 Dashboard

    ಜಿಲ್ಲೆಗಳಲ್ಲಿಯೂ ಚಾಮರಾಜನಗರ ಹೊರತುಪಡಿಸಿ ಬೇರಾವ ಜಿಲ್ಲೆಯೂ ಹಸಿರು ವಲಯದಲ್ಲಿ ಇಲ್ಲ. ಈವರೆಗೆ ಸುರಕ್ಷಿತವಾಗಿದ್ದ ಗ್ರಾಮೀಣ ಪ್ರದೇಶಗಳಲ್ಲಿಯೂ ಸೋಂಕಿನ ಭೀತಿ ಶುರುವಾಗಿದೆ. ಈಗ ಯಾವ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಈಗ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳೇ ಇಲ್ಲ! ಅಂದರೆ ಯಾವ ನಿಯೋಜಿತ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿ ಇಲ್ಲ. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸಜ್ಜಾಗಿಲ್ಲ. ಸೋಂಕಿತರು ಸಹಾಯವಾಣಿಗೆ ಕರೆ ಮಾಡಿ ‘ನನಗೆ ಕೊರೊನಾ ಸೋಂಕು ತಗುಲಿದೆ. ದಯವಿಟ್ಟು ಚಿಕಿತ್ಸೆಗೆ ಕರೆದೊಯ್ಯಿರಿ’ ಎಂದು ಮನವಿ ಮಾಡಿದರೂ ಕರೆದೊಯ್ಯಲು ಬರುವವರಿಲ್ಲ!

    ಹಾಗಿದ್ದರೆ ಸೋಂಕು ನಿಯಂತ್ರಣಕ್ಕೆ ಮತ್ತೆ ಲಾಕ್‌ಡೌನ್ ಅನಿವಾರ್ಯವೇ?
    ‘ಅನಿವಾರ್ಯ’ ಎಂದು ಹೇಳುತ್ತಿದ್ದಾರೆ ತಜ್ಞರು. ರಾಜ್ಯ ಸರಕಾರಕ್ಕೂ ಅದೇ ವರದಿ ಸಲ್ಲಿಸಿದ್ದಾರೆ. ಭಾಗಶಃ ಲಾಕ್‌ಡೌನ್ ಮಾಡಿ ಎಂಬ ಸಲಹೆ ನೀಡಿದ್ದಾರೆ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರಕಾರ ಈ ಕುರಿತು ತೀರ್ಮಾನ ಕೈಗೊಳ್ಳಲಿದೆ.

    ವಾಸ್ತವ ಎಂದರೆ ಸಂಪುಟದ ಸದಸ್ಯರಲ್ಲಿಯೇ ಲಾಕ್‌ಡೌನ್ ಜಾರಿ ಕುರಿತು ಭಿನ್ನಾಭಿಪ್ರಾಯವಿದೆ. ‘70 ದಿನ ಲಾಕ್‌ಡೌನ್ ಜಾರಿ ಮಾಡಿದಾಗ ಕೊರೊನಾ ಹೋಯಿತೆ’ ಎಂದು ಹಿರಿಯ ಸಚಿವರೊಬ್ಬರು ಪ್ರಶ್ನಿಸಿದ್ದಾರೆ. ‘ಲಾಕ್‌ಡೌನ್ ಜಾರಿ ಮಾಡಿದರೆ ಆರ್ಥಿಕತೆಗೆ ಹೊಡೆತ ಬೀಳಲಿದೆ’ ಎಂದು ಮತ್ತೊಬ್ಬ ಮಂತ್ರಿ ಹೇಳಿದ್ದಾರೆ. ‘ಜನರ ಜೀವಕ್ಕಿಂತ ಆರ್ಥಿಕತೆ ದೊಡ್ಡದಲ್ಲ. ಭಾಗಶಃ ಲಾಕ್‌ಡೌನ್, ಸೀಲ್‌ಡೌನ್ ಬಿಟ್ಟು ೨೦ ದಿನ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿ’ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ‘ಜನರಿಗೆ ಉಚಿತ ಚಿಕಿತ್ಸೆ ನೀಡಿ’ ಎಂದು ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಕ್ಕೆ ಸಲಹೆ ಮಾಡಿದ್ದಾರೆ.


    ಸದ್ಯದ ಪರಿಸ್ಥಿತಿ ಗಮನಿಸಿದರೆ ಲಾಕ್‌ಡೌನ್ ಮಾಡದೇ ಬೇರೆ ವಿಧಿ ಇಲ್ಲ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರು ಮತ್ತು ಸಾವಿನ ಸಂಖ್ಯೆ 11 ದಿನದಲ್ಲಿ ಬಹಳ ಏರಿಕೆ ಕಂಡಿದೆ. ಸಾವಿನ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಜೂನ್ 11ರಂದು 581 ಸೋಂಕಿತರು ಇದ್ದರೆ ಮೃತರ ಸಂಖ್ಯೆ 23ಇತ್ತು. ಅದೇ ಜೂನ್ 21ರಂದು ಸೋಂಕಿತರ ಸಂಖ್ಯೆ 1232ಕ್ಕೆ ಏರಿದ್ದರೆ ಮೃತಪಟ್ಟವರ ಸಂಖ್ಯೆಯೂ ೬೪ಕ್ಕೆ ಏರಿಕೆಯಾಗಿದೆ. ಜೂನ್ ೨೪ರ ವರದಿಯಂತೆ ಬೆಂಗಳೂರು ನಗರದಲ್ಲಿ 1,505 ಮಂದಿ ಸೋಂಕಿತರಿದ್ದರೆ, 73 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಫೆ.24ರಂದು ಒಂದೇ ಪ್ರಕರಣ ಪತ್ತೆಯಾಗಿದ್ದರೆ, ಜೂನ್ ೨೪ರಂದು ಸೋಂಕಿತರ ಸಂಖ್ಯೆ 9,721ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 150 ತಲುಪಿದೆ.

    ರಾಜ್ಯದಲ್ಲಿ ಮೊದಲ 1000 ಪ್ರಕರಣ ದಾಖಲಾಗದು 113 ದಿನ ಬೇಕಾಗಿತ್ತು. ನಂತರ ಕೇವಲ ೩೬ ದಿನಗಳಲ್ಲಿ 8106 ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ನಿಯಂತ್ರಣ ಮೀರಿ ವ್ಯಾಪಿಸುತ್ತಿದೆ, ಸಮುದಾಯ ಪ್ರಸರಣದ ಹಂತಕ್ಕೆ ತಲುಪಿದೆ ಎನ್ನುವುದಕ್ಕೆ ಇದಕ್ಕಿಂತ ಆಧಾರ ಬೇಕಿಲ್ಲ.

    ನಿಜ, ಲಾಕ್‌ಡೌನ್‌ನಿಂದ ರಾಜ್ಯದ ಆರ್ಥಿಕತೆಗೆ ಹೊಡೆತ ಬೀಳಲಿದೆ. ಹಾಗಂತ ‘ಜನ ಏನಾದರೂ ಮಾಡಿಕೊಳ್ಳಲಿ’ ಎಂದು ಸರಕಾರ ಸುಮ್ಮನಿರಲೂ ಸಾಧ್ಯವಿಲ್ಲ. ಸೋಂಕು ಕೆಲವೇಕೆಲವು ಜನರ ಕೊಡುಗೆಯೂ ಇದೆ ಎನ್ನುವುದು ನಿಜ. ಅವರಿಗೆ ಲಾಕ್‌ಡೌನ್, ಮಾಸ್ಕ್ ಯಾವುದೂ ಸಂಬಂಧವಿಲ್ಲ. ಹಾಗಂತ ಅವರಿಂದ ಉಳಿದ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ.

    ಇದರ ನಡುವೆಯೇ ಗುರುವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯೂ ಆರಂಭವಾಗುವುದರಿಂದ ಮತ್ತು ಸರಕಾರ ಈ ಪರೀಕ್ಷೆಯನ್ನು ಪ್ರತಿಷ್ಟೆಯ ವಿಷಯವಾಗಿ ತೆಗೆದುಕೊಂಡಿರುವುದರಿಂದ ಲಾಕ್‌ಡೌನ್ ಜಾರಿ ಮಾಡುತ್ತದೆಯಾ? ಜಾರಿ ಮಾಡಿದರೆ ಯಾವ ರೀತಿ ಎಂಬ ಪ್ರಶ್ನೆಗಳು ಮೂಡಿವೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!