22 C
Karnataka
Tuesday, May 21, 2024

    ಕೋವಿಡ್-19; ಗರಬಡಿದ ನೇಯ್ಗೆ ಉದ್ಯಮ, ಸಂಕಷ್ಟದಲ್ಲಿ ನೇಕಾರ

    Must read

    “ಅಮಾನಿ*ಯಿಂದ ಆಗಲೇ ಕಡಿಮೆ ಸೀರೆ ನೇಯುತ್ತಿದ್ದೆವು. ಲಾಕ್ ಡೌನ್ ಕೆಲಸ ಪೂರ್ತಿ ನಿಲ್ಲಿಸಿಯೇ ಬಿಟ್ಟಿತು” ಎನ್ನುವುದು ದೊಡ್ಡಬಳ್ಳಾಪುರದ ನೇಕಾರ ಡಿ.ಸಿ.ಬಾಬು ಅಳಲು. ವಿದ್ಯೆಗೆ ತಿಲಾಂಜಲಿ ನೀಡಿ ವಂಶ ಪಾರಂಪರ್ಯವಾಗಿ ಬಂದಿರುವ ನೇಯ್ಗೆ ಉದ್ಯಮವನ್ನು ಆರಿಸಿಕೊಂಡಾಗ ನೇಯ್ಗೆ ಉದ್ಯಮದಲ್ಲಿ ಬೆಳೆಯುವ ಹುರುಪು, ಉತ್ಸಾಹವಿತ್ತು. ಅದಕ್ಕೆ ತಕ್ಕಂತೆ ಅವಕಾಶಗಳೂ ಇದ್ದವು. ಆದರೆ ಕಳೆದ ಒಂದು ದಶಕದಲ್ಲಿ ಆಗುತ್ತಿರುವ ಆರ್ಥಿಕತೆಯ ತೀವ್ರ ಬದಲಾವಣೆಗಳು ಬದುಕನ್ನು ದುಸ್ತರಗೊಳಿಸುತ್ತಿರುವಾಗ ಲಾಕ್ ಡೌನ್ ಎನ್ನುವುದು ಮತ್ತೊಂದು ಮಾರಣಾಂತಿಕ ಪೆಟ್ಟು.

    ಕೋವಿಡ್-19 ಸಾಂಕ್ರಾಮಿಕ ದೇಶವನ್ನಷ್ಟೇ ಅಲ್ಲ, ವಿಶ್ವವನ್ನೂ ಲಾಕ್ ಡೌನ್ ಗೆ ಕೊಂಡೊಯ್ಯಿತು. ಲಾಕ್ ಡೌನ್ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿತು.

    ಪರಿಹಾರ ಎಂಬ ಮರೀಚಿಕೆ

    ಈಗಾಗಲೇ ಸಂಕಷ್ಟದಲ್ಲಿದ್ದ ನೇಕಾರರಿಗೆ ರಾಜ್ಯ ಸರ್ಕಾರ ತಲಾ 2000ರೂ. ಪರಿಹಾರ ನೀಡುವ ಭರವಸೆಯನ್ನು ಮೇ 20, 2020ರಂದು ನೀಡಿತು. ಆದರೆ ಒಂದು ತಿಂಗಳಾದರೂ ಇನ್ನೂ ಅದಕ್ಕೆ ಸಂಬಂಧಿಸಿದ ಅರ್ಜಿ ಮಾದರಿ ವಿದ್ಯುಚ್ಛಾಲಿತ ಮಗ್ಗಗಳ ನೇಕಾರರಿಗೆ ದೊರೆತಿಲ್ಲ. ಕೈಮಗ್ಗ ನೇಕಾರರು ಈ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾತ್ರ ಪ್ರಾರಂಭವಾಗಿದೆ ಎಂದು ದೊಡ್ಡಬಳ್ಳಾಪುರ ನೇಕಾರ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಜಿ.ಹೇಮಂತರಾಜ್ ಹೇಳುತ್ತಾರೆ.

    ರಾಜ್ಯದಲ್ಲಿ 1,25,000 ನೇಕಾರರಿಗೆ ಮಾತ್ರ ಪರಿಹಾರ ಘೋಷಿಸಲಾಗಿದೆ. ಆದರೆ ವಾಸ್ತವವಾಗಿ ವಿದ್ಯುಚ್ಛಾಲಿತ ಮಗ್ಗಗಳೇ ಸುಮಾರು 1,80,000ಕ್ಕೂ ಹೆಚ್ಚು ಇದ್ದು ಅವುಗಳಿಗೆ ಪೂರಕ ಕೆಲಸಗಳೂ ಸೇರಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಆಧಾರಪಟ್ಟಿದ್ದಾರೆ. ಕೈ ಮಗ್ಗಗಳು ಸುಮಾರು 34,000 ಇವೆ ಎಂದು ಅಂದಾಜಿಸಲಾಗಿದೆ. ನೇಯ್ಗೆಯೊಂದಿಗೆ ನೇಯ್ಗೆ ಸಂಬಂಧಿಸಿದ ಬಣ್ಣ ಹಾಕುವುದು, ಅಚ್ಚು ಕೆತ್ತುವುದು, ವಾರ್ಪು ಸುತ್ತುವುದು, ಜಾಕಾರ್ಡ್ ಕಾರ್ಡ್ ಪಂಚಿಂಗ್, ಡಿಸೈನ್ ರೂಪಿಸುವುದು ಇತ್ಯಾದಿ ಅಸಂಖ್ಯವಾದ ಸಂಬಂಧಿಸಿದ ಕೆಲಸಗಳಿವೆ. ಅವುಗಳನ್ನು ನೇಯ್ಗೆ ಎಂದು ಪರಿಗಣಿಸಲಾಗಿಲ್ಲ.

    ಇತರೆ ವೃತ್ತಿಯವರಿಗೆಲ್ಲಾ ಸರ್ಕಾರ ತಲಾ 5000ರೂ. ಪರಿಹಾರ ಘೋಷಿಸಿ ನೇಕಾರರಿಗೆ ಕೇವಲ 2000ರೂ. ಪರಿಹಾರ ನೀಡುವ ಮೂಲಕ ನಿರ್ಲಕ್ಷಿಸಿದೆ ಎನ್ನುವುದು ಅವರ ಆರೋಪ. ಬೆಂಗಳೂರು, ಮೈಸೂರು ಹಾಗೂ ದಕ್ಷಿಣ ಕರ್ನಾಟಕಕ್ಕೆ ಧರ್ಮಾವರಂ, ತೆಲಂಗಾಣ, ತಮಿಳುನಾಡು ಪ್ರಮುಖ ಮಾರುಕಟ್ಟೆಗಳು. ಉತ್ತರ ಕರ್ನಾಟಕದ ನೇಕಾರರಿಗೆ ಮಹಾರಾಷ್ಟ್ರ ಪ್ರಮುಖ ಮಾರುಕಟ್ಟೆ. ಆದರೆ ಪ್ರಸ್ತುತ ಅಲ್ಲಿ ಸಾಂಕ್ರಾಮಿಕ ಭೀತಿಯಿಂದ ವ್ಯಾಪಾರ ವಹಿವಾಟುಗಳು ಹಿನ್ನಡೆ ಕಂಡಿವೆ. ಈ ಕೋವಿಡ್ ಆತಂಕ ದೂರವಾದ ನಂತರ ಮಾತ್ರ ಜನರು ಬಟ್ಟೆ ಕೊಳ್ಳಲು ಬರಬಹುದು. ಅದರ ಲಕ್ಷಣಗಳು ಸದ್ಯಕ್ಕಂತೂ ಕಾಣುತ್ತಿಲ್ಲ ಎನ್ನುವುದು ನೇಕಾರರ ಅಭಿಪ್ರಾಯ.

    ಹೊಸ ತಲೆಮಾರಿಗೆ ನೇಕಾರಿಕೆ ಬೇಡ

    ಈ ಬೆಳವಣಿಗೆಗಳಿಂದ ಕೃಷಿಯಂತೆಯೇ ಹೊಸ ತಲೆಮಾರು ನೇಯ್ಗೆ ಉದ್ಯಮವನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಸಣ್ಣ ಸಂಬಳವಾದರೂ ವೇತನದ ಕೆಲಸಕ್ಕೆ ಹೋದರೆ ಸಾಕು ಎಂಬ ತೀರ್ಮಾನಕ್ಕೆ ಹೊಸ ತಲೆಮಾರು ಬಂದಿದೆ. ಹೊಸದಾಗಿ ಮಗ್ಗದ ಕಸುಬು ಕಲಿತುಕೊಳ್ಳುವವರ ಸಂಖ್ಯೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ರಾಜ್ಯದ ಪ್ರಮುಖ ನೇಯ್ಗೆ ಪ್ರದೇಶಗಳಾದ ನೆಲಮಂಗಲ, ಹೊಸಕೋಟೆ, ಆನೇಕಲ್, ಮೊಳಕಾಲ್ಮೂರು, ಇಳಕಲ್, ಶಹಾಪುರ, ಗದಗ, ಬೆಟಗೇರಿ, ಚಾಮರಾಜನಗರ, ಚಿಂತಾಮಣಿ, ತುಮಕೂರುಗಳಲ್ಲೂ ಈ ಪ್ರವೃತ್ತಿ ಮುಂದುವರಿದಿದೆ. ಕಿರಿಯ ತಲೆಮಾರಿನ ಯುವಕರು ಈ ಸಾಂಪ್ರದಾಯಿಕ ನೇಕಾರಿಕೆಯನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿ ಲಾಭದ ಸಾಧ್ಯತೆಗಳನ್ನು ಕಂಡುಕೊಳ್ಳುವುದರ ಬದಲು ಅನ್ಯ ಉದ್ಯೋಗಗಳತ್ತ ವಲಸೆ ಹೋಗುತ್ತಿದ್ದಾರೆ.

    ಆಂಧ್ರ ಮಾದರಿ ಇರಲಿ

    ಆಂಧ್ರಪ್ರದೇಶದಲ್ಲಿ ಸಾಕಷ್ಟು ವರ್ಷಗಳ ಹಿಂದೆಯೇ ಜವಳಿ ಇಲಾಖೆ ವತಿಯಿಂದ ನೇಕಾರಿಕೆಯಲ್ಲಿ ತೊಡಗಿರುವವರ ನೋಂದಣಿ ಮಾಡಿಕೊಂಡು ಗುರುತಿನ ಚೀಟಿ ವಿತರಿಸಿದೆ. ಸರ್ಕಾರದ ಯಾವುದೇ ಸೌಲಭ್ಯಗಳನ್ನು ನೀಡುವಾಗ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಇದರಿಂದಾಗಿ ಲಾಕ್‌ಡೌನ್‌ ಜಾರಿ ಸಂದರ್ಭದಲ್ಲಿ ಅಲ್ಲಿನ ಸರ್ಕಾರ ನೇಕಾರಿಕೆಝಢಝಝಯಲ್ಲಿ ತೊಡಗಿಸಿಕೊಂಡಿರುವವರಿಗೆ ಆರ್ಥಿಕ ನೆರವು ಸೇರಿದಂತೆ ಸಾಕಷ್ಟು ಇತರೆ ಸೌಲಭ್ಯಗಳನ್ನು ನೀಡಿದೆ. ಇದೇ ಮಾದರಿಯಲ್ಲಿ ನಮ್ಮಲ್ಲೂ ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಜವಳಿ ಇಲಾಖೆ ವತಿಯಿಂದ ಗುರುತಿನ ಚೀಟಿ ನೀಡುವ ಕೆಲಸ ತುರ್ತಾಗಿ ಆಗಬೇಕು ಎನ್ನುವುದು ನೇಕಾರರ ಆಗ್ರಹ.

    ನೇಕಾರರು ಕಾರ್ಮಿಕರಲ್ಲ

    ವಿದ್ಯುತ್‌  ಚಾಲಿತ ಮಗ್ಗಗಳ ಮುಖ್ಯಜೀವಾಳವೇ ಕಾರ್ಮಿಕರು. ಆದರೆ ಇವರು ಅಸಂಘಟಿತರು. ಬಹುತೇಕರು ತಮ್ಮದೇ ಮಗ್ಗಗಳನ್ನು ಮನೆಗಳಲ್ಲಿ ಹಾಕಿಕೊಂಡು ಗೃಹ ಕೈಗಾರಿಕೆ ನಡೆಸುವವರು. ಹೆಚ್ಚು ಮಗ್ಗಗಳ ಫ್ಯಾಕ್ಟರಿಯಲ್ಲಿ ನೇಯ್ಗೆ ಮಾಡುವವರಿಗೆ ಕಾರ್ಮಿಕ ಕಾನೂನುಗಳ ಅನುಷ್ಠಾನಕ್ಕೂ ಹಲವು ಬಿಕ್ಕಟ್ಟುಗಳಿವೆ. ನೋಂದಣಿ ಇಲ್ಲದ ಕಾರಣಕ್ಕೆ ಕಾರ್ಮಿಕರು ಯಾವುದೇ ಸವಲತ್ತುಗಳು, ಸರ್ಕಾರಿ ಪ್ರಯೋಜನಗಳನ್ನು ಪಡೆಯಲು ಆಗುವುದಿಲ್ಲ. ಇಡೀ ಜೀವನ ಅಸಂಘಟಿತ ಕಾರ್ಮಿಕರಾಗಿಯೇ ಕಳೆಯುತ್ತಿದ್ದಾರೆ. ಕನಿಷ್ಠ ಇಎಸ್ಐನಂತಹ ಸೌಲಭ್ಯಗಳನ್ನು ಪಡೆಯಲೂ ಸಾಧ್ಯವಿಲ್ಲ. ಇದನ್ನು ವ್ಯವಸ್ಥಿತಗೊಳಿಸಲು ಸಾಕಷ್ಟು ಇಚ್ಛಾಶಕ್ತಿ ಬೇಕಾಗುತ್ತದೆ. ನೇಯ್ಗೆ ಉದ್ಯಮದಲ್ಲಿ ಕಾರ್ಮಿಕರ ಹೋರಾಟಗಳು ಮತ್ತು ಅವರ ತ್ಯಾಗಗಳು ಮಾಲೀಕರಿಗೆ ಅನುಕೂಲವಾಗಿ ಅವರ ಹೆಸರಲ್ಲಿ ಮಾಲೀಕರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳೆ ಹೆಚ್ಚಾಗಿವೆ. ಆದುದರಿಂದ  ಸರ್ಕಾರ ಕೂಡಲೆ ತ್ವರಿತವಾಗಿ ಕಾರ್ಮಿಕರ ಸರ್ವೆ ನಡೆಸಿ ಗುರುತಿನ ಚೀಟಿಯನ್ನು ಕೊಡುವ ಅಗತ್ಯವಿದೆ ಎನ್ನುವುದು ಕಾರ್ಮಿಕ ಪರ ಹೋರಾಟಗಾರ ಎಂ.ಕೃಷ್ಣಮೂರ್ತಿ ಅವರ ಅಭಿಪ್ರಾಯ.

    *ಅಮಾನಿ : ವ್ಯಾಪಾರ ವಹಿವಾಟು ನೀರಸವಾಗಿರುವ ಅವಧಿ

    ವಿ. ಎಲ್. ಪ್ರಕಾಶ್
    ವಿ. ಎಲ್. ಪ್ರಕಾಶ್
    ವಿ.ಎಲ್.ಪ್ರಕಾಶ್ ವಿದ್ಯಾರ್ಥಿ ದೆಸೆಯಿಂದಲೇ ಬರಹದ ವ್ಯವಸಾಯ. ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಣೆ. ಪ್ರಸ್ತುತ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!