22 C
Karnataka
Tuesday, May 21, 2024

    ಕೊರೊನಾದಿಂದಾಗಿ ಈ ವರ್ಷ ಬ್ಯಾಂಕ್ ಜಾಬ್ ಸಿಗುತ್ತಾ?

    Must read

    ಕೊರೊನಾ (ಕೋವಿಡ್-19) ವೈರಾಣು ಜಾಗತಿಕ  ಅರ್ಥ ವ್ಯವಸ್ಥೆಗೆ, ಅದರಲ್ಲೂ ಉದ್ಯೋಗ ಮಾರುಕಟ್ಟೆಗೆ ನೀಡಿರುವ ಹೊಡೆತ ಊಹಿಸಲೂ ಸಾಧ್ಯವಾಗುತ್ತಿಲ್ಲ. ಈಗ ಎಲ್ಲೆಲ್ಲೂ ‘ಜಾಬ್ ಕಟ್’ ನದೇ ಸುದ್ದಿ. ಹೀಗಿರುವಾಗ ಜಾಬ್ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಏನು ಮಾಡಬೇಕು, ಜಾಬ್ ಪಡೆಯುವುದು ಹೇಗೆ? ಎಲ್ಲೆಲ್ಲಿ ಜಾಬ್ ಅವಕಾಶಗಳಿರಬಹುದು ಎಂಬ ಚಿಂತೆಯಲ್ಲಿದ್ದಾರೆ.

    ಅಂತಾರಾಷ್ಟ್ರೀಯ ಮ್ಯಾನೇಜ್ ಮೆಂಟ್ ಕನ್ಸಲ್ಟಿಂಗ್ ಕಂಪನಿ ‘ಅರ್ಥುರ್ ಡಿ ಲಿಟ್ಟಲ್ ‘ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ, ಕೊರೊನಾದ ಪರಿಣಾಮವಾಗಿ ನಮ್ಮ ದೇಶದಲ್ಲಿ 13.6 ಕೋಟಿಗೂ ಹೆಚ್ಚು ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.  ದೇಶದಲ್ಲಿನ ನಿರುದ್ಯೋಗ ದರವು ಶೇ. 7.6 ರಿಂದ ಶೇ.35ಕ್ಕೆ ಏರಲಿದೆ. ಜಿಡಿಪಿಯ ಕುಸಿತ ಕೋಟ್ಯಂತರ ಜನರನ್ನು ಬಡತನಕ್ಕೆ ತಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗ ಪಡೆಯುವುದು ಪ್ರತಿಯೊಬ್ಬರಿಗೂ ಸವಾಲಿನ ಸಂದರ್ಭ ಎಂದು ಬಿಡಿಸಿ ಹೇಳಬೇಕಾಗಿಲ್ಲ.

    ಖಾಸಗಿ ಕ್ಷೇತ್ರದಲ್ಲಿನ ಉದ್ಯೋಗ ನಷ್ಟ, ಅಭದ್ರತೆ, ವೇತನ ಕಡಿತ, ಹೆಚ್ಚಿನ ಅವಧಿಯ ದುಡಿಮೆ  ಮತ್ತಿತರ ಕಾರಣಗಳಿಂದಾಗಿ ಇಂದು ಪ್ರತಿಯೊಬ್ಬರೂ ಖಾಸಗಿ ಕ್ಷೇತ್ರದ ಉದ್ಯೋಗವನ್ನು ಬಿಟ್ಟು, ಸರಕಾರಿ ನೌಕರಿಯತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಏನಿಲ್ಲವೆಂದರೂ ಸರಕಾರಿ ಉದ್ಯೋಗದಲ್ಲಿ ‘ಉದ್ಯೋಗ ಭದ್ರತೆ’ಯಾದರೂ ಇರುತ್ತದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

    ನಮ್ಮ ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ನೀಡುತ್ತಿದ್ದ ಕ್ಷೇತ್ರದಲ್ಲಿ ಬ್ಯಾಂಕಿಂಗ್ ಕ್ಷೇತ್ರವೂ ಒಂದು. ಸದ್ಯದ ಕೋವಿಡ್ ಪರಿಣಾಮ ಹಾಗೂ ಬ್ಯಾಂಕುಗಳ ವಿಲೀನದ ಪ್ರಕ್ರಿಯೆಯಿಂದಾಗಿ ಈ ಕ್ಷೇತ್ರ ಮೊದಲಿನಂತೆಯೇ ನೇಮಕ ಮಾಡಿಕೊಳ್ಳಲಿದೆಯೇ? ಈ ಪ್ರಶ್ನೆ ಹಲವರದ್ದು.

    ಅವಕಾಶಗಳು ಹೇಗಿವೆ?

    ಕೇಂದ್ರ ಸರ್ಕಾರದ ಹೊಸ ಹೊಸ ಆರ್ಥಿಕ ನೀತಿಗಳು, ಹಣಕಾಸು ವ್ಯವಹಾರದಲ್ಲಿ ಮಾಡಲಾಗುತ್ತಿರುವ ಬದಲಾವಣೆಗಳು ಪ್ರತಿಯೊಬ್ಬರೂ ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುವಂತೆ ಮಾಡಿದೆ. ಆರ್ಥಿಕ ಬೆಳವಣಿಗೆ ಎಂದರೆ ಕೃಷಿ, ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿ ಮತ್ತು ಸೇವಾ ಕ್ಷೇತ್ರಗಳ ವಿಸ್ತರಣೆ. ಇದರಲ್ಲಿ ವಿತ್ತೀಯ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ಸಹಜವಾಗಿಯೇ ವಿತ್ತೀಯ ಸಂಸ್ಥೆಗಳ ವ್ಯಾಪ್ತಿ  ವಿಸ್ತಾರಗೊಳ್ಳುತ್ತಿದೆ.

    ಭದ್ರ ಆರ್ಥಿಕ ಮತ್ತು ಕಾನೂನಾತ್ಮಕ ನೆಲೆಗಟ್ಟಿನಲ್ಲಿ ಬೇರು ಬಿಟ್ಟಿರುವ ದೇಶದ ಬ್ಯಾಂಕಿಂಗ್ ಕ್ಷೇತ್ರ ದೇಶದ ಪ್ರತಿಯೊಬ್ಬ ನಾಗರಿಕರನ್ನೂ ಒಳಗೊಳ್ಳುವ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುತ್ತಿದೆ. ಹೀಗಾಗಿ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳು ವ್ಯವಹಾರವನ್ನು ವಿಸ್ತರಿಸಿಕೊಳ್ಳುವ ತವಕದಲ್ಲಿವೆ. ಪ್ರತಿ ದಿನವೂ ಹೊಸ ಹೊಸ ಬಗೆಯ ಸೇವೆಗಳನ್ನು ಆರಂಭಿಸುತ್ತಿವೆ. ಹೀಗಾಗಿ ಈ ಕ್ಷೇತ್ರದಲ್ಲಿ ಉದ್ಯೋಗ ಪ್ರತಿ ವರ್ಷ ಸೃಷ್ಟಿಯಾಗುತ್ತಲೇ ಇರುತ್ತದೆ.

    ಆದರೆ ಆಟೋಮೇಷನ್ ಬಂದ ಮೇಲೆ ಸಹಜವಾಗಿಯೇ ಬ್ಯಾಂಕುಗಳಲ್ಲಿ ನೇಮಕದ ಪ್ರಮಾಣ ಕಡಿಮೆಯಾಗುತ್ತಾ ಬಂದಿತ್ತು. ಈಗ ಕೊರೊನಾ ಎಫೆಕ್ಟ್ ಬೇರೆ ಇರುವುದರಿಂದ ಇನ್ನಷ್ಟು ಕಡಿಮೆಯಾಗಬಹುದು. ಆದರೆ ಸರ್ಕಾರ ಘೋಷಿಸಿರುವ ವಿವಿಧ ಪ್ಯಾಕೇಜ್ ಗಳು, ವಿನಾಯಿತಿಗಳು ಬ್ಯಾಂಕಿಂಗ್ ಕ್ಷೇತ್ರದ ಜವಾಬ್ದಾರಿಗಳನ್ನು ಇನ್ನಷ್ಟು ಹೆಚ್ಚಿಸಿದೆ. ಹೀಗಾಗಿ ಉದ್ಯೋಗಿಗಳ ಅವಶ್ಯಕತೆಯಂತೂ ಈ ಕ್ಷೇತ್ರದಲ್ಲಿ ಸದಾ ಇರಲಿದೆ.

    ವಿಲೀನದಿಂದಾಗಿ ಬದಲಾವಣೆ

    ನಿಮಗೆಲ್ಲಾ ತಿಳಿದಿರುವಂತೆ ಕೇಂದ್ರ ಸರ್ಕಾರ 2019ರ ಆಗಸ್ಟ್ ನಲ್ಲಿ  10 ರಾಷ್ಟ್ರೀಕೃತ ಬ್ಯಾಂಕುಗಳನ್ನು ನಾಲ್ಕು ಬ್ಯಾಂಕುಗಳಲ್ಲಿ ವಿಲೀನಗೊಳಿಸುವ ಕುರಿತು ಪ್ರಕಟಣೆ ನೀಡಿತ್ತು.

    ಇದರ ಪ್ರಕಾರ ಎಸ್ ಬಿಐನ ಅಸೋಸಿಯೇಟ್ ಬ್ಯಾಂಕುಗಳನ್ನು ಮತ್ತು ಮಹಿಳಾ ಬ್ಯಾಂಕ್ ಅನ್ನು ಎಸ್ ಬಿಐನಲ್ಲಿ ವಿಲೀನಗೊಳಿಸಲಾಗಿದೆ. ಅಂತೆಯೇ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನವಾಗಿವೆ.

    ಪಂಜಾಬ್ ನ್ಯಾಷನಲ್ ಬ್ಯಾಂಕ್ ನೊಂದಿಗೆ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ವಿಲೀನಗೊಂಡರೆ, ಕೆನರಾ ಬ್ಯಾಂಕ್ ನೊಂದಿಗೆ ಸಿಂಡಿಕೇಟ್ ಬ್ಯಾಂಕ್ ಸೇರಿದೆ. ಯೂನಿಯನ್ ಬ್ಯಾಂಕ್ ನೊಂದಿಗೆ ನಮ್ಮ ಕಾರ್ಪೋರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ವಿಲೀನವಾಗಿದೆ. ಇಂಡಿಯನ್ ಬ್ಯಾಂಕ್ ನೊಂದಿಗೆ ಅಲಹಾಬಾದ್ ಬ್ಯಾಂಕ್ ಅನ್ನು ವಿಲೀನಗೊಳಿಸಲಾಗಿದೆ.

    ಹೀಗಾಗಿ 2017ರಲ್ಲಿದ್ದ 27 ರಾಷ್ಟ್ರೀಕೃತ ಬ್ಯಾಂಕುಗಳ ಸಂಖ್ಯೆ, 2019ರಲ್ಲಿ 18ಕ್ಕೆ ಇಳಿದಿತ್ತು. ಈ ವರ್ಷ 12ಕ್ಕೆ ಇಳಿದಿದೆ. ಈಗ ವಿವಿಧ ಬ್ಯಾಂಕುಗಳನ್ನು ವಿಲೀನಗೊಳಿಸಿಕೊಂಡ ಆರು ಮತ್ತು ಸ್ವತಂತ್ರ ಆರು ಬ್ಯಾಂಕುಗಳು ರಾಷ್ಟ್ರೀಕೃತ ಬ್ಯಾಂಕುಗಳು ಮಾತ್ರ ಇವೆ. ಈ ಬ್ಯಾಂಕುಗಳಲ್ಲಿ ಈಗ ಉದ್ಯೋಗ ಪಡೆಯುವ ಸವಾಲು ಎಲ್ಲರ ಮುಂದಿದೆ.

    ನೇಮಕ ಹೇಗೆ?

    ನಿಮಗೆಲ್ಲಾ ತಿಳಿದಿರುವಂತೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಹುದ್ದೆಗಳಿಗೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ  (ಐಬಿಪಿಎಸ್) ಮೂಲಕ ನೇಮಕ ನಡೆಯಲಿದೆ. ಇದೊಂದು ಸ್ವಾಯತ್ತ ನೇಮಕಾತಿ ಸಂಸ್ಥೆ.  ಇದು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್‌ನ (ಐಬಿಎ) ಅಸೋಸಿಯೇಟ್ ಮೆಂಬರ್ ಆಗಿದೆ.

    ಈ ಸಂಸ್ಥೆಯು ಸ್ವತಂತ್ರವಾದ ಆಡಳಿತ ಮಂಡಳಿಯೊಂದನ್ನು ಹೊಂದಿರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್ (ಎನ್‌ಐಬಿಎಂ), ಕೇಂದ್ರ ಹಣಕಾಸು ಸಚಿವಾಲಯ, ವಿವಿಧ ರಾಷ್ಟ್ರೀಕೃತ ಬ್ಯಾಂಕ್, ವಿಮಾ ಸಂಸ್ಥೆಗಳ ಪ್ರತಿನಿಧಿಗಳು ಈ ಆಡಳಿತ ಮಂಡಳಿಯಲ್ಲಿರುತ್ತಾರೆ.

    ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಬ್ಯಾಂಕು, ವಿತ್ತೀಯ ಸಂಸ್ಥೆ ಹಾಗೂ ವಿಮಾ ಸಂಸ್ಥೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದು, ಉದ್ಯೋಗಿಗಳ ನೈಪುಣ್ಯತೆ ಹೆಚ್ಚಿಸಲು ಅಧ್ಯಯನ ನಡೆಸುವುದು, ಉದ್ಯೋಗಿಗಳಿಗೆ ತರಬೇತಿ ನೀಡುವುದು, ಕಾರ್ಯಗಾರ ನಡೆಸುವುದು ಈ ಸಂಸ್ಥೆಯ ಮುಖ್ಯ ಕೆಲಸವಾಗಿದೆ.

    ಕಳೆದ ವರ್ಷ  ಐಬಿಪಿಎಸ್  ಒಟ್ಟಾರೆಯಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ  17, 500 (ಪಿಒ-ಕ್ಲರ್ಕ್ ಹುದ್ದೆಗಳೂ ಸೇರಿ) ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಕೈಗೊಂಡಿತ್ತು. ಈ ವರ್ಷ ಕೂಡ  ಬ್ಯಾಂಕುಗಳು ವಿಲೀನವಾಗಿದ್ದರೂ ಹೆಚ್ಚು ಕಡಿಮೆ ಇಷ್ಟೇ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಅಂದಹಾಗೆ ಎರಡು ಹಂತದ ಸ್ಪರ್ಧಾತ್ಮಕ ಪರೀಕ್ಷೆ  ಮತ್ತು ಸಂದರ್ಶನ ನಡೆಸಿ, ಈ ನೇಮಕ ನಡೆಯಲಿದೆ.

    ಇದಲ್ಲದೆ, ದೇಶದ ಅತಿದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸುಮಾರು 15 ಸಾವಿರಕ್ಕೂ ಹೆಚ್ಚು ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತದೆ. ಇದರಲ್ಲಿ ಕ್ಲರಿಕಲ್ ಕೇಡರ್ ನ ಹುದ್ದೆಗಳ ಸಂಖ್ಯೆಯೇ ಪ್ರತಿ ವರ್ಷ ಸುಮಾರು 8 ಸಾವಿರಕ್ಕೂ ಹೆಚ್ಚಿರುತ್ತದೆ.

    ಲಾಕ್ ಡೌನ್ ನ ಸಂದರ್ಭದಲ್ಲಿ  ಹಲವಾರು ಅಭ್ಯರ್ಥಿಗಳು  ಹೊಸ ಬಗೆಯ ಕೌಶಲ್ಯಗಳನ್ನು ತಮ್ಮದಾಗಿಸಿಕೊಂಡು ಬ್ಯಾಂಕ್ ನೇಮಕಕ್ಕೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರಾಗಿದ್ದಾರೆ ಅಂದರೆ ಅತಿಶಯೋಕ್ತಿಯಲ್ಲ. ಇನ್ನೊಂದು ಕಡೆಗೆ ಒಂದಿಷ್ಟು ಯುವಕರು ಲಾಕ್ ಡೌನ್ ನಿಂದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿದೆ ಅಂತ ಕೈ ಚೆಲ್ಲಿ ಕುಳಿತಿದ್ದಾರೆ. ನಿಜವಾಗಿಯೂ ಧನಾತ್ಮಕವಾಗಿ ಚಿಂತಿಸುವವರು ಹೊಸ ಹೊಸ ಬಾಣಗಳನ್ನು ಅವರ ಬತ್ತಳಿಕೆಯಲ್ಲಿ ಸೇರಿಸಿಕೊಂಡು ಪರೋಕ್ಷವಾಗಿ ತಯಾರಾಗಿದ್ದಾರೆ. ಇದರಲ್ಲಿ ನೀವು ಯಾವ ಗುಂಪಿಗೆ ಸೇರಿದವರಾಗಿದ್ದೀರಿ ಎಂದು ಯೋಚಿಸಿ.

    ಒಟ್ಟಾರೆ ವಿತ್ತೀಯ ವ್ಯವಹಾರಗಳನ್ನು ಸಮರ್ಥವಾಗಿ ಮುನ್ನಡೆಸುವ ಅರ್ಹತೆ ಹೊಂದಿರುವ ಉದ್ಯೋಗಿಗಳನ್ನು ಈ ಕ್ಷೇತ್ರ ಕೈ ಬೀಸಿ ಕರೆಯುತ್ತಿದೆ. ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಮುಖ್ಯವಾಗಿ ನೇಮಕ ನಡೆಯುತ್ತಿದ್ದು, ಯಾವುದೇ ಪದವಿ ಹೊಂದಿದವರೂ ಉದ್ಯೋಗ ಪಡೆಯಬಹುದಾಗಿದೆ.

    ನಿಮ್ಮ ಅರ್ಹತೆಗೆ ಅನುಗುಣವಾಗಿ ನೀವು ಬ್ಯಾಂಕಿಂಗ್ ಉದ್ಯಮದಲ್ಲಿ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಬಹುದು. ಹೆಚ್ಚಿನ ಬ್ಯಾಂಕಿಂಗ್   ಉದ್ಯೋಗಗಳಿಗೆ,  ನೀವು ಪರೀಕ್ಷೆಯನ್ನು ಬರೆಯಬೇಕಾಗಿದೆ  ಮತ್ತು ಅದೇ ಸಮಯದಲ್ಲಿ, ನೀವು ಅತ್ಯುತ್ತಮ ಸಂವಹನ ಕೌಶಲ್ಯ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರಬೇಕು. ನೀವು ದೇಶದ ಯಾವುದೇ ವಾಣಿಜ್ಯ ಬ್ಯಾಂಕಿನಲ್ಲಿ ಉಪ-ಸಿಬ್ಬಂದಿ ಅಥವಾ ಗುಮಾಸ್ತ ಅಥವಾ ಪ್ರೊಬೆಷನರಿ ಅಧಿಕಾರಿಯಾಗಿ ನಿಮ್ಮ ವೃತ್ತಿ ಜೀವನ ಪ್ರಾರಂಭಿಸಬಹುದು. ಇದಲ್ಲದೆ, ನೀವು ಬ್ಯಾಂಕಿನಲ್ಲಿ ತಜ್ಞ ಅಧಿಕಾರಿಯಾಗಿಯೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೇರಬಹುದು. ನೀವು ಆರ್‌ಬಿಐ,  ನಬಾರ್ಡ್, ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಮುಂತಾದ ಸಂಸ್ಥೆಗಳಿಗೆ ಸೇರುತ್ತಿದ್ದರೆ ನೀವು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಬಹುದು.

    ಆರ್.ಕೆ. ಬಾಲಚಂದ್ರ
    ಆರ್.ಕೆ. ಬಾಲಚಂದ್ರ
    ಕೊಡಗು ಲೀಡ್‌ ನ ಬ್ಯಾಂಕ್‌ ನ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಆರ್‌ ಕೆ ಬಾಲಚಂದ್ರ ಅವರು ಖ್ಯಾತ ತರಬೇತಿದಾರರೂ ಹೌದು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಳೆದ 35 ವರ್ಷಗಳಿಂದ ಉಚಿತ ತರಬೇತಿ ನೀಡುತ್ತಾ ಬಂದಿರುವ ಅವರು, 30 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆಯಲು ಕಾರಣರಾಗಿದ್ದಾರೆ. ಸರಕಾರಿ ಉದ್ಯೋಗದ ಬಗ್ಗೆ ಮಾಹಿತಿ ನೀಡುವ ʼಗೌರ್ಮೆಂಟ್‌ ಜಾಬ್‌ ಪಡೆಯುವುದು ಹೇಗೆʼ ಎಂಬ ಕೃತಿ ಬರೆದಿದ್ದಾರೆ. ಚಿಕ್ಕಮಗಳೂರಿನ ಕಾರ್ಪೋರೇಷನ್‌ ಬ್ಯಾಂಕ್‌ ಸ್ವ ಉದ್ಯೋಗ ತರಬೇತಿ ಕೇಂದ್ರವನ್ನು ಅತ್ಯುತ್ತಮ ಕೇಂದ್ರವಾಗಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಂದ ಪ್ರಶಸ್ತಿ, ಮೈಸೂರಿನ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಅಂಕಣ ಬರೆಯುತ್ತಿದ್ದಾರೆ.
    spot_img

    More articles

    2 COMMENTS

    LEAVE A REPLY

    Please enter your comment!
    Please enter your name here

    Latest article

    error: Content is protected !!